ಛತ್ತೀಸ್‌ಗಢದ ಬಿಲಾಸ್ಪುರ್‌ನಲ್ಲಿ ನಡೆದ ಭೀಕರ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾನೆ ಎಂಬ ಕಾರಣಕ್ಕೆ 22 ವರ್ಷದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು 25 ವರ್ಷದ ಕಾಮತ್ ಪ್ರಸಾದ್ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಯುವತಿ ರೋಶಿನಿ (22) ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಉದ್ಯೋಗಿಯಾಗಿದ್ದ ಕಾಮತ್ ಮತ್ತು ರೋಶಿನಿ ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಕಳೆದ ಎರಡು–ಮೂರು ದಿನಗಳಿಂದ ಕಾಮತ್ ರೋಶಿನಿಯೊಂದಿಗೆ ಮಾತುಕತೆ ನಿಲ್ಲಿಸಿ, ಆಕೆಯ ಮೊಬೈಲ್ ನಂಬರ್ ಕೂಡ ಬ್ಲಾಕ್ ಮಾಡಿದ್ದ. ಇದರಿಂದ ಆತ ಬೇರೆ ಹುಡುಗಿಯ ಜೊತೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನ ರೋಶಿನಿಗೆ ಮೂಡಿತ್ತು.
ಕೋಪಗೊಂಡ ರೋಶಿನಿ ಚಾಕುವೊಂದನ್ನು ತೆಗೆದುಕೊಂಡು ನೇರವಾಗಿ ಕಾಮತ್ ಮನೆಗೆ ತೆರಳಿದ್ದಾಳೆ. ಮನೆಗೆ ಪ್ರವೇಶಿಸಿದ ಕೂಡಲೇ ಆತನ ಮೊಬೈಲ್ ಕೇಳಿದ್ದಾಳೆ. ಆದರೆ ಕಾಮತ್ ಫೋನ್ ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ರೋಶಿನಿ, ತಂದಿದ್ದ ಚಾಕುವಿನಿಂದ ಕಾಮತ್ ಎದೆಗೆ ಇರಿದಿದ್ದಾಳೆ.
ಗಲಾಟೆ ಕೇಳಿ ರೂಮ್‌ಮೇಟ್‌ಗಳು ಸ್ಥಳಕ್ಕೆ ಧಾವಿಸಿದ್ದು, ಕಾಮತ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಾಮತ್ ಮೃತಪಟ್ಟಿದ್ದಾನೆ. ಘಟನೆಯ ಬಳಿಕ ಪೊಲೀಸರು ರೋಶಿನಿಯನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಾಯ್‌ಫ್ರೆಂಡ್‌ಗೆ ಹೆದರಿಸಲು ಮಾತ್ರ ಚಾಕು ತಂದಿದ್ದೆ. ಆದರೆ ಜಗಳ ತೀವ್ರಗೊಂಡಾಗ ಇದ್ದಕ್ಕಿದ್ದಂತೆ ಇರಿದುಬಿಟ್ಟೆ ಎಂದು ರೋಶಿನಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.
ಪೊಲೀಸ್ ಅಧಿಕಾರಿ ಸುಮ್ಮತ್ ಸಾಹು ಮಾಹಿತಿ ನೀಡಿದ್ದು, ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಮೃತ ಕಾಮತ್ ಪ್ರಸಾದ್ ಸೂರ್ಯವಂಶಿ ಬಿಜೆಪಿ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್ ಸೂರ್ಯವಂಶಿ ಅವರ ಸಂಬಂಧಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ : ಲಾವಣ್ಯ ಅನಿಗೋಳ




