ಅಕ್ರಮ ವಿದೇಶಿಗರು ಹಾಗೂ ವಲಸಿಗರು ದೇಶದ ಭದ್ರತೆಗೆ ಗಂಭೀರ ಅಪಾಯ ಎಂಬ ವಿಚಾರವನ್ನು ಪುನರುಚ್ಚರಿಸಿರುವ ಕರ್ನಾಟಕ ಹೈಕೋರ್ಟ್, ರಾಜ್ಯದಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ಸರ್ಕಾರದ ಮಾಹಿತಿಯನ್ನು ಉಲ್ಲೇಖಿಸಿದೆ. ಈ ಸಂಬಂಧ ಅಕ್ರಮ ವಲಸಿಗರ ವಿರುದ್ಧ ರಾಜ್ಯ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬುದರ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿರುವ ನೈಜೀರಿಯನ್ ಪ್ರಜೆಯ ವಿಚಾರಣೆ ವೇಳೆ ಮಂಗಳವಾರವೇ ಅಕ್ರಮವಾಗಿ ನೆಲೆಸಿರುವ ವಿದೇಶಿಗರು ದೇಶದ ಭದ್ರತೆಗೆ ಬೆದರಿಕೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಬುಧವಾರ ನಡೆದ ವಿಚಾರಣೆಯಲ್ಲೂ ಇದೇ ಆತಂಕವನ್ನು ನ್ಯಾಯಪೀಠ ಮೌಖಿಕವಾಗಿ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಬೆಂಗಳೂರು ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್ ಕೆರೆಹಳ್ಳಿ ಅಲಿಯಾಸ್ ಪುನೀತ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ, FRROನಲ್ಲಿ ನೋಂದಣಿ ಮಾಡಿಸದ ವಿದೇಶಿಗರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸ್ಪಷ್ಟಪಡಿಸಿತು. ವೀಸಾ ಹಾಗೂ ಪರ್ಮಿಟ್ ಇಲ್ಲದೇ ವಿದೇಶಿಗರು ಬೆಂಗಳೂರಿನ ಹಲವು ಭಾಗಗಳಲ್ಲಿ ನೆಲೆಸಿದ್ದಾರೆ. ಸರ್ಕಾರ ಇದನ್ನು ತಡೆಯದೇ ಇದ್ದು, ಇದನ್ನು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಹೇಗೆ? ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತು.
ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಅವಧಿ ಮೀರಿಸಿ ನೆಲೆಸಿರುವವರನ್ನು ಯಾವಾಗ ದೇಶದಿಂದ ಹೊರಗೆ ಕಳುಹಿಸುತ್ತೀರಿ? FRRO ಮೂಲಕ ಯಾವ ಕ್ರಮ ಜರುಗಿಸಲಾಗಿದೆ?
ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ. ಜೊತೆಗೆ FRROಗೆ ಸಮನ್ಸ್ ಜಾರಿ ಮಾಡುವುದಾಗಿ ತಿಳಿಸಿದೆ. ಅಂತಿಮವಾಗಿ, ಸುಮಾರು 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ವರದಿ : ಲಾವಣ್ಯ ಅನಿಗೋಳ




