ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ; ಗಂಗರ ಸಾಮ್ರಾಜ್ಯದ ವೈಭವ ಅನಾವರಣ

 

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು ಕೇಂದ್ರವಾಗಿಟ್ಟುಕೊಂಡು ಪ್ರದರ್ಶನವನ್ನು ರೂಪಿಸಲಾಗಿದ್ದು, ಲಕ್ಷಾಂತರ ಹೂಗಳಿಂದ ನಿರ್ಮಿಸಲಾದ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಆಗಸ್ಟ್ 6ರಿಂದ 17ರವರೆಗೆ ನಡೆಯಲಿರುವ ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು 12 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿವರ್ಷ 10 ದಿನಗಳ ಕಾಲ ಮಾತ್ರ ನಡೆಯುತ್ತಿದ್ದ ಪ್ರದರ್ಶನವನ್ನು ಈ ಬಾರಿ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.

ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಗಂಗರ ಕಾಲದ ನಾಗೇಶ್ವರ ದೇವಸ್ಥಾನದ ಪುಷ್ಪ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಬಾಹುಬಲಿ ಮೂರ್ತಿಯ ಪುಷ್ಪ ಪ್ರತಿಕೃತಿಯೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಸುಮಾರು 34 ಲಕ್ಷಕ್ಕೂ ಅಧಿಕ ವಿವಿಧ ಜಾತಿಯ ಹೂಗಳನ್ನು ಬಳಸಿ ಗಾಜಿನ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕಲಾತ್ಮಕವಾಗಿ ಅಲಂಕರಿಸಲಾಗಿದೆ.

ದೇಶದ ವಿವಿಧ ರಾಜ್ಯಗಳ ಜೊತೆಗೆ ವಿದೇಶಗಳಿಂದ ತರಿಸಲಾದ ವಿವಿಧ ಬಗೆಯ ಹೂಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತಂದಿವೆ. ಬಣ್ಣ ಬಣ್ಣದ ಪುಷ್ಪ ವಿನ್ಯಾಸಗಳು, ಉದ್ಯಾನ ಅಲಂಕಾರಗಳು ಹಾಗೂ ವಿಶೇಷ ಸೆಲ್ಫಿ ಪಾಯಿಂಟ್‌ಗಳು ಮೊದಲ ದಿನವೇ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದವು.

ಉದ್ಯಾನ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಪ್ರದರ್ಶನ ವೀಕ್ಷಣೆಗೆ ಬರುವವರು ಉದ್ಯಾನದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿಯ ಸೌಂದರ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ವರ್ಷದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವು ಸಾರ್ವಜನಿಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ.

About The Author