ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಪ್ರತಿಕ್ರಿಯೆ: “ಮಿಸ್ಟೇಕ್ ಆಗಿದೆ, ಮುಂದಿನ ಬಾರಿ ಅವಕಾಶ ನೀಡುವುದಾಗಿ ನಾಯಕರು ಭರವಸೆ ನೀಡಿದ್ದಾರೆ”

ಬೆಂಗಳೂರು, ಆಗಸ್ಟ್ 7: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರು ಕೈತಪ್ಪಿದ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದೇ ಇರುವುದು “ಮಿಸ್ಟೇಕ್” ಆಗಿದ್ದು, ಮುಂದಿನ ಬಾರಿ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪುವ ಪ್ರಶ್ನೆಯೇ ಇರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ಸಿಗದಿರುವುದು ಏಕೆ ಎಂಬುದು ನಮಗೂ ತಿಳಿದಿಲ್ಲ. ತಾವು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದರೂ ಅವಕಾಶ ತಪ್ಪಿರುವುದು ಬೇಸರ ತಂದಿದೆ ಎಂದು ಹೇಳಿದರು.

ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಮ್ಮ ನಿವಾಸಕ್ಕೆ ಆಗಮಿಸಿ ಮಾತುಕತೆ ವಿಚಾರ ಪ್ರಸ್ತಾಪಿಸಿದ ಅವರು, “ಈ ಬಾರಿ ಮಿಸ್ಟೇಕ್ ಆಗಿದೆ. ಮುಂದಿನ ಬಾರಿ ಖಂಡಿತ ಸಚಿವ ಸ್ಥಾನ ನೀಡುತ್ತೇವೆ ಎಂದು ನಾಯಕರು ಭರವಸೆ ನೀಡಿದ್ದಾರೆ. ಸ್ವಲ್ಪ ಸಹಕರಿಸಿ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕೃಷ್ಣಪ್ಪ, “2023ರಿಂದಲೂ ನನ್ನ ಕಾರ್ಯಕರ್ತರು ಸಚಿವ ಸ್ಥಾನಕ್ಕಾಗಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರಕ್ಕೆ ಬಂದಾಗಲೂ ಎರಡು ಬಾರಿ ಸಚಿವ ಸ್ಥಾನ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಆದರೂ ಈ ಬಾರಿ ಅವಕಾಶ ಸಿಗದಿರುವುದು ಅವರಿಗೆ ನೋವು ತಂದಿದೆ. ಕಾರ್ಯಕರ್ತರಿಗೆ ಆದ ನೋವು ಕಾಂಗ್ರೆಸ್ ಪಕ್ಷಕ್ಕೂ ಆಗಿರುವ ಅವಮಾನವಾಗಿದೆ” ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು, “ರಾಹುಲ್ ಗಾಂಧಿ ಅವರಿಗೆ ಎಲ್ಲವೂ ಗೊತ್ತಿದೆ. ಅವರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ” ಎಂದರು.

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಬಿಟ್ಟರೆ ಬೇರೆ ಯಾವುದೇ ಹುದ್ದೆಯ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣಪ್ಪ, “ನನಗೆ ಬೇಕಾಗಿರುವುದು ಸಚಿವ ಸ್ಥಾನ ಮಾತ್ರ. ಅದರ ಹೊರತಾಗಿ ಬೇರೆ ಯಾವುದೇ ಹುದ್ದೆಯ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

About The Author