Political News: ರೋಗಿಗಳ ಅನುಕೂಲಕ್ಕಾಗಿ ಅಳವಡಿಸಿದ್ದ ಯುಪಿಐ ಸ್ಕ್ಯಾನರ್ ತೆಗೆದು ವೈಯಕ್ತಿಕ ಯುಪಿಐ ಸ್ಕ್ಯಾನರ್ ಹಾಕಿ, 23 ಲಕ್ಷ ವಂಚಿಸಿದ್ದ ವಿಕ್ಟೋರಿಯಾ ಆಸ್ಪತ್ರೆಯ 8 ಸಿಬ್ಬಂದಿಗಳ ವಿರುದ್ದ ದೂರು ದಾಖಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಅಧಿಕಾರಿಗಳು ಸೇರಿದಂತೆ ಇಡೀ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಇನ್ನು ಸಾಮಾನ್ಯ ಸಿಬ್ಬಂದಿಗಳು ಸುಮ್ಮನಿರುತ್ತಾರೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅಧಿಕೃತ UPI ಸ್ಕ್ಯಾನರ್ ತೆಗೆದು ಹಾಕಿ, ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ UPI scanner ಅಳವಡಿಸಿ ಬಡರೋಗಿಗಳಿಂದ ₹23 ಲಕ್ಷ ರೂಪಾಯಿ ಲೂಟಿ ಮಾಡಿರುವ ಆಸ್ಪತ್ರೆಯ ಸಿಬ್ಬಂದಿಗಳು, ಕಾಂಗ್ರೆಸ್ ಸರ್ಕಾರ ನಿಜವಾದ, ಅಸಲಿ PayCM ಸರ್ಕಾರ ಎಂದು ಸಾಬೀತು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮೂರು ಬಿಟ್ಟವರು ಊರಿಗೇ ದೊಡ್ಡವರು ಎನ್ನುವಂತೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗಲಿದೆ ಎಂದು ಖಾತ್ರಿ ಆಗಿರುವ ಸಚಿವರು, ಶಾಸಕರು ನಿರ್ಲಜ್ಜವಾಗಿ ಎಗ್ಗಿಲ್ಲದೆ ಸಿಕ್ಕಸಿಕ್ಕ ಕಡೆ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.




