ಲಾಡ್ಲೆ ಮಶಾಕ್ ದರ್ಗಾ ಗಲಭೆ ಕೇಸ್: ನ್ಯಾಯಾಲಯದ ತೀರ್ಪು ಸ್ವಾಗತಿಸಿದ ಬಿಜೆಪಿಗರು..

Political News: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್ ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿಗರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ; ಮತಬ್ಯಾಂಕ್ ರಾಜಕಾರಣಕ್ಕಿಂತ ನ್ಯಾಯವೇ ಮೇಲು ಎಂದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್,ಅಶೋಕ್, ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣದಲ್ಲಿ ಮತಾಂಧರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಪತ್ರ ಬರೆದವರಲ್ಲಿ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯು.ಟಿ. ಖಾದರ್ ಕೂಡ ಇದ್ದರು. ಆ ಮನವಿಗೆ ಸ್ಪಂದಿಸಿ ಕ್ರಮ ಕೈಗೊಂಡವರೂ ಇಂದು ಕಾಂಗ್ರೆಸ್ ಸರ್ಕಾರದ ಭಾಗವೇ ಆಗಿದ್ದಾರೆ.

ಇದೀಗ ಆ ನಿರ್ಧಾರಕ್ಕೆ ಮಾನ್ಯ ಹೈಕೋರ್ಟ್ ತಡೆ ನೀಡಿರುವುದು ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣಕ್ಕೆ ತಕ್ಕ ಉತ್ತರ. ಸಂವಿಧಾನದ ಹೆಸರಿನಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಲಭೆ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿದ್ದು ಯಾವ ಸಂವಿಧಾನದ ಅಡಿಯಲ್ಲಿ? ಕಾನೂನನ್ನು ದುರ್ಬಲಗೊಳಿಸಿ ಮತಾಂಧರನ್ನು ಓಲೈಸುವ ರಾಜಕಾರಣವೇ ಕಾಂಗ್ರೆಸ್‌ನ ನಿಜವಾದ ಮುಖ. ಮತಾಂಧರ ಪರ ನಿಲ್ಲುವ ಕಾಂಗ್ರೆಸ್‌ಗೆ ನ್ಯಾಯಾಲಯವೇ ಸ್ಪಷ್ಟ ಸಂದೇಶ ನೀಡಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ; ಮತಬ್ಯಾಂಕ್ ರಾಜಕಾರಣಕ್ಕಿಂತ ನ್ಯಾಯವೇ ಮೇಲು ಎಂದು ಆರ್.ಅಶೋಕ್ ಹೇಳಿದ್ದಾರೆ.

ರಾಜ್ಯ ಸರ್ಕಾರದ “ಕೇಸ್ ವಾಪಸಿ” ಅಭಿಯಾನಕ್ಕೆ ಹೈಕೋರ್ಟ್ ತಡೆ ನೀಡಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸೇರಿ ಕೆಲವು ಕೋಮುಗಲಭೆ ಪ್ರಕರಣಗಳ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧದ 52 ಪ್ರಕರಣಗಳನ್ನು ವಾಪಸ್ ಪಡೆದುಕೊಂಡ 2026 ಮೇ 27ರ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದು ರಾಜ್ಯ ಸರ್ಕಾರಕ್ಕೆ ಆದ ಕಪಾಳಮೋಕ್ಷ. ನ್ಯಾಯಾಲಯದ ಈ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

About The Author