ಬಾಂಗ್ಲಾ ಹಿಂದೂ ಸಿಡಿದೆದ್ದರೆ ಜಗತ್ತಿನ ಬೆಂಬಲ ಖಚಿತ!

ಬಾಂಗ್ಲಾದೇಶದಲ್ಲಿನ ಹಿಂದೂಗಳು ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಸ್ವದೇಶದಲ್ಲಿಯೇ ಉಳಿದು ಹೋರಾಟಕ್ಕೆ ಮುಂದಾದರೆ, ವಿಶ್ವದಾದ್ಯಂತ ಇರುವ ಸಮಸ್ತ ಹಿಂದೂಗಳ ಬೆಂಬಲ ಅವರಿಗೆ ಲಭಿಸಲಿದೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

RSS ಶತಮಾನೋತ್ಸವದ ಅಂಗವಾಗಿ ಮುಂಬೈನ ವರ್ಲಿಯ ನೆಹರೂ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದರು. ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳು ವಾಸವಿದ್ದು, ಅವರು ತಮ್ಮ ಹಕ್ಕುಗಳಿಗಾಗಿ ಧೈರ್ಯವಾಗಿ ಹೋರಾಟ ನಡೆಸಿದರೆ ಜಗತ್ತಿನ ಎಲ್ಲ ಹಿಂದೂಗಳು ಅವರ ಬೆನ್ನಿಗೆ ನಿಲ್ಲಲಿದ್ದಾರೆ ಎಂದು ಭಾಗವತ್ ಸ್ಪಷ್ಟಪಡಿಸಿದರು.

ಬಾಂಗ್ಲಾದೇಶದ ಮೂಲಭೂತವಾದಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿಯ ಹತ್ಯೆಯ ಬಳಿಕ, ಅಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳು ಹೆಚ್ಚಾಗುತ್ತಿರುವ ನಡುವೆ, ಭಾಗವತ್ ನೀಡಿರುವ ಈ ಸಂದೇಶ ಮಹತ್ವ ಪಡೆದುಕೊಂಡಿದೆ.

ದೇಶದ ಆಂತರಿಕ ವಿಚಾರಗಳ ಕುರಿತು ಮಾತನಾಡಿದ ಅವರು, ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿದರು. ಅದೇ ವೇಳೆ, ಏಕರೂಪ ನಾಗರಿಕ ಸಂಹಿತೆಯನ್ನು ಸಮಾಜದ ಎಲ್ಲ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಬೇಕು. ಅದು ಸಮಾಜದ ವಿಭಜನೆಗೆ ಕಾರಣವಾಗಬಾರದು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ತಮ್ಮ ಹಾಗೂ ಆರ್‌ಎಸ್‌ಎಸ್‌ನ ನಿಲುವು ಎಂದು ಭಾಗವತ್ ಪುನರುಚ್ಚರಿಸಿದರು. ಇತ್ತೀಚಿನ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯಾಪಾರದಲ್ಲಿ ಕೊಡು–ಕೊಳ್ಳುವಿಕೆ ಸಹಜ. ಆದರೆ ಅದು ಇಬ್ಬರಿಗೂ ಲಾಭದಾಯಕವಾಗಿರಬೇಕು. ಭಾರತಕ್ಕೆ ನಷ್ಟವಾಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ನನಗೆ ಈಗ 75 ವರ್ಷ ವಯಸ್ಸಾಗಿದೆ. ನಿವೃತ್ತಿ ಬಗ್ಗೆ ಸಂಘಟನೆಗೆ ತಿಳಿಸಿದ್ದೇನೆ. ಆದರೆ ಕೆಲಸ ಮುಂದುವರಿಸಲು ಸಂಘ ಕೇಳಿಕೊಂಡಿದೆ. RSS ಯಾವಾಗ ಕೆಳಗಿಳಿಯಲು ಹೇಳುತ್ತದೆಯೋ, ಆ ಕ್ಷಣದಲ್ಲೇ ನಿವೃತ್ತಿ ಪಡೆಯುವೆ ಎಂದು ಭಾಗವತ್ ಹೇಳಿದರು.

ವರದಿ : ಲಾವಣ್ಯ ಅನಿಗೋಳ

About The Author