ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 2

Spiritual: ಭಾಗ 1ರಲ್ಲಿ ನೀವು ದೇವರ ಸ್ಥಾನದಲ್ಲಿ ನಿಂತಿದ್ದ ಭಕ್ತ ಮಾಡಿದ ಎಡವಟ್ಟೇನು ಎಂದು ತಿಳಿದಿದ್ದೀರಿ. ಇದೀಗ, ಆ ಭಕ್ತ ಮಾಡಿದ ತಪ್ಪಿನಿಂದ ಏನೇನಾಯಿತು ಅಂತಾ ದೇವರು ವಿವರಿಸುತ್ತಾರೆ.

ನಾನು ಇದನ್ನೆಲ್ಲ ಮುಂಚೆಯೇ ನಿರ್ಧರಿಸಿದ್ದೆ. ಹಾಗಾಗಿ ನಿನ್ನ ಬಾಯಿಗೆ ಬೀಗ ಹಾಕಿ, ಸುಮ್ಮನೆ ನಿಲ್ಲಬೇಕು ಎಂದು ಹೇಳಿದ್ದೆ. ಆದರೆ ನೀನು ಮಾತನಾಡಿ, ನನ್ನ ನಿರ್ಧಾರವನ್ನೆಲ್ಲ ಹಾಳು ಮಾಡಿದೆ ಎಂದು ದೇವರು ಭಕ್ತನ ಮೇಲೆ ಕೋಪ ಮಾಡುತ್ತಾನೆ.

ಆಗ ಭಕ್ತ, ನಾನೇನು ತಪ್ಪು ಮಾಡಿದೆ..? ಶ್ರೀಮಂತನ ಹಣವನ್ನು ಆತನಿಗೆ ಮರಳಿ ಸಿಗುವಂತೆ ಮಾಡಿದೆ. ಯಾರದ್ದೋ ಹಣ ತೆಗೆದುಕ“ಂಡು ಹೋಗುತ್ತಿದ್ದವನ ಬಂಧನವಾಗುವಂತೆ ಮಾಡಿದ. ತಪ್ಪೇ ಮಾಡದ ಮೀನುಗಾರ ಜೈಲಿಗೆ ಹೋಗದಂತೆ ತಡೆದೆ ಎನ್ನುತ್ತಾನೆ.

ಆಗ ಮಾತನಾಡಿದ ದೇವರು, ಅಯ್ಯೋ ಮೂರ್ಖ. ಇದೆಲ್ಲ ವಿಧಿಯ ಆಟವಾಗಿತ್ತು. ಶ್ರೀಮಂತ ಅಡ್ಡ ದಾರಿ ಹಿಡಿದು ಆ ಹಣ ಸಂಪಾದನೆ ಮಾಡಿದ್ದ. ಹಾಗಾಗಿ ಆ ಹಣ ಕಳೆದು ಹೋಗಿ, ಆತನಿಗೆ ಪಾಪ ತಾಕದಿರಲಿ. ಆ ಹಣ ಬಡವನ ಸೇವೆಗೆ ಹೋಗಿ, ಆತನಿಗೆ ಸ್ವಲ್ಪ ಪುಣ್ಯ ಸಿಗಲಿ ಎಂದು ನಾನು ಹಾಗೆ ಮಾಡಿದ್ದೆ. ಹಾಗಾಗಿಯೇ ಅನ್ನ ಉಣ್ಣಲೂ ಗತಿಯಿಲ್ಲದೇ, ನನ್ನಲ್ಲಿ ಪ್ರಾರ್ಥಿಸಿದ ಬಡವನಿಗೆ ಆ ಹಣ ಸಿಗುವಂತೆ ಮಾಡಿದೆ.

ಇನ್ನು ಮೀನುಗಾರ, ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ. ನನ್ನ ಪ್ರಾಣಕ್ಕೇನೂ ಅಪಾಯವಾಗದಿರಲಿ ಎಂದು ಬೇಡಿದ. ಇಂದು ಆತ ಮೀನು ಹಿಡಿಯಲು ಹೋದರೆ, ಖಂಡಿತ ಆತನ ಪ್ರಾಣ ಹೋಗುತ್ತಿತ್ತು. ಹಾಗಾಗಿ ಆತ ಜೈಲಿಗೆ ಹೋಗಲಿ ಎಂದು ನಾನೇ ಆ ರೀತಿ ಸಮಯ ರೂಪಿಸಿದ್ದೆ. ಆದರೆ ನಿನ್ನ ಅಧಿಕಪ್ರಸಂಗ ತನದಿಂದ ಎಲ್ಲ ಹಾಳಾಯಿತು ಎಂದು ದೇವರು ಬೇಸರ ವ್ಯಕ್ತಪಡಿಸುತ್ತಾನೆ.

ಇದು 1 ಕಾಲ್ಪನಿಕ ಕಥೆ. ಅದೇ ರೀತಿ ನಮ್ಮ ಜೀವನದಲ್ಲೂ ನಾವು ಕೆಲವು ಸಂದರ್ಭದಲ್ಲಿ ಮೌನವಾಗಿ, ತಾಳ್ಮೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಈ ಭಕ್ತ ಮಾಡಿದ ತಪ್ಪನ್ನು ನಾವೂ ಮಾಡಿ, ಜೀವನದಲ್ಲಾಗಬೇಕಾದ ಉತ್ತಮ ಕಾರ್ಯಕ್ಕೆ ನಮ್ಮ ಕೈಯ್ಯಾರೆ ನಾವೇ ಭಂಗ ತರುತ್ತೇವೆ.

About The Author