ನೆಲ- ಜಲ- ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಕೇಳುವ ದರಿದ್ರ ಸ್ಥಿತಿ ನಮಗೆ ಬಂದಿಲ್ಲ: CM

Political News: ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಉರ್ದು ಭಾಷೆ ಜಾಹೀರಾತು ನೀಡಿದ್ದಕ್ಕೆ, ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು ಆಡಿರುವ ವೀರಾವೇಶದ ಮಾತುಗಳನ್ನು ಆಲಿಸಿದೆ. ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಉರ್ದು ಭಾಷೆಯ ಜಾಹೀರಾತು ನೀಡಿ, ಈಗ ನಮ್ಮ ವಿರುದ್ಧ ಮುಗಿಬೀಳುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಸರ್ಕಾರ ಜಾಹೀರಾತು ನೀಡುತ್ತದೆ. ಹೆಚ್ಚೆಚ್ಚು ಜನರನ್ನು ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯ ಜಾಹೀರಾತು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದರಿಂದ ಪತ್ರಿಕೆಯ ಓದುಗರಿಗೆ ಜಾಹೀರಾತಿನ ವಿಚಾರ ಅರ್ಥವಾಗಿ, ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ನಾಯಕರು ಒಂದಲ್ಲ, ಎರಡಲ್ಲ ಹತ್ತಾರು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದಾರೆ, ಆಗ ಅವರಿಗೆ ಅದು ತುಷ್ಟೀಕರಣ ಅನ್ನಿಸಲಿಲ್ಲ. ಈಗ ನಮ್ಮ ಸರ್ಕಾರ ನೀಡಿರುವ ಉರ್ದು ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಇದ್ದಕ್ಕಿದ್ದಂತೆ ಎದ್ದುನಿಂತಿದೆ. ನಿಮ್ಮ ಈ ‘ಹಿಪೋಕ್ರಸಿ’ ಗೋಸುಂಬೆಯನ್ನೇ ನಾಚಿಸುವಂತಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ನೆಲ – ಜಲ – ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು. ಇದಕ್ಕೆ ಇತಿಹಾಸ ಸಾಕ್ಷಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು ಹೌದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

About The Author