Tumakuru: ತುಮಕೂರು: ತುಮಕೂರಿನಲ್ಲಿ ಜೆಡಿಎಸ್ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷನಿಂದ ವೃದ್ಧೆಯ ಹತ್ಯೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜಿನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿನ್ನದ ಆಸೆಗೆ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನೇ ಹತ್ಯೆಗೈಯ್ಯಲಾಗಿದೆ.
ಮುತ್ತುರಾಜ್ ಎಂಬಾತ 75 ವರ್ಷದ ನಾಗಮ್ಮ ಎಂಬ ವೃದ್ಧೆಯನ್ನು ಹತ್ಯೆ ಮಾಡಿ, ಮೂರು ಮಂದಿ ದರೋಡೆಕೋರರು ಬಂದು ಹತ್ಯೆ ಮಾಡಿರುವಂತೆ ಬಿಂಬಿಸಿದ್ದ. ನಾಗಮ್ಮನನ್ನು ಉಸಿರುಗಟ್ಟಿಸಿ, ಮುತ್ತುರಾಜ್ ಹತ್ಯೆ ಮಾಡಿದ್ದು, ಆಕೆಯ ಮೈಮೇಲಿದ್ದ 110 ಗ್ರಾಂ ಚಿನ್ನಾಭರಣವನ್ನ ದೋಚಿ ಪರಾರಿಯಾಗಿದ್ದ. ಬಳಿಕ ಆಕೆಯ ದೇಹದ ಮೇಲೆ ಖಾರದ ಪುಡಿ ಹರಡಿ, ಹಿತ್ತಲಿನಲ್ಲೂ ಸ್ವಲ್ಪ ಖಾರದ ಪುಡಿ ಎರಚಿದ್ದ.
ಜತೆಗೆ ಮನೆಯಲ್ಲಿ ಮದ್ಯದ ಪಾಕೇಟ್ ಮತ್ತು ಬಿಸ್ಲೇರಿ ಬಾಟಲ್ಗಳನ್ನು ಇರಿಸಿ, ಮನೆ ಮುಂದೆ ಯಾರದ್ದೋ ಚಪ್ಪಲಿ ಬಿಟ್ಟು, ಪೋಲೀಸರ ತಲೆಗೆ ಹುಳ ಬಿಡುವಂತೆ ಮುತ್ತುರಾಜ್ ಕೃತ್ಯ ಎಸಗಿದ್ದ. ಆದರೆ 24 ಗಂಟೆಯ“ಳಗೇ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಪ್ರತಿದಿನ ರಾತ್ರಿ ಊರಿನ ಕೆಲ ಮಹಿಳೆಯರ ಜತೆ ನಾಗಮ್ಮ ವಾಕಿಂಗ್ ಮಾಡುತ್ತಿದ್ದಳು. ಆದರೆ ರಾತ್ರಿ ನಾಗಮ್ಮ ಆಚೆ ಬರಲಿಲ್ಲ, ಮರುದಿನವೂ ಬಾಗಿಲು ತೆರೆಯಲಿಲ್ಲ. ಆ ಕಾರಣಕ್ಕೆ ಸಂಬಂಧಿಕರಿಗೆ ಕಾಲ್ ಮಾಡಿ, ಪಕ್ಕದ ಮನೆಯವರು ಈ ವಿಷಯ ತಿಳಿಸಿದ್ದರು. ನಾಗಮ್ಮ ಬಾಗಿಲು ತೆಗಿಯುತ್ತಿಲ್ಲ ಎಂಬ ಸುದ್ದಿ ಕೇಳಿ, ಮನೆಯ ಬಳಿ ಓರ್ವ ವ್ಯಕ್ತಿ ಬಂದಿದ್ದು, ಬಾಗಿಲು ಮುರಿದು, ನೋಡಿದಾಗ ಆತ ಶಾಕ್ ಆಗಿದ್ದಾನೆ.
ಯಾರೋ ದರೋಡೆಕೋರರು ಈ ಕೆಲಸ ಮಾಡಿದ್ದಾರೆಂದು ಅನುಮಾನಿಸಲಾಗಿತ್ತು. ಆದರೆ ಈ ಸಂಬಂಧ ಅಮೃತೂರು ಪೋಲೀಸರಿಗೆ ದೂರು ನೀಡಲಾಯಿತು. ಬಳಿಕ ಸಿಕ್ಕ ಸಾಕ್ಷ ಆಧರಿಸಿ, ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಈತನ ಹಿನ್ನೆಲೆ ಹೇಳೋದಾದ್ರೆ, ಮುತ್ತುರಾಜ್ ಈ ಹಿಂದೆ ಉಜ್ಜಿನಿ ಗ್ರಾಮಪಂಚಾಯಿತಿ ಅಧ್ಯಕ್ಷನಾಗಿದ್ದ. ಅಲ್ಲದೇ ರೇಷ್ಮೆ ಕೃಷಿಕನೂ ಆಗಿದ್ದ. ಆದರೆ ಈತನಿಗೆ ಜೂಜಿನ ಚಟವಿತ್ತು. ಜೂಜಾಡಿ ಆಡಿ ಸಾಲ ಮಾಡಿದ್ದ. ಆದರೆ ಆ ಸಾಲ ತೀೀರಿಸಲು, ಈ ನಾಗಮ್ಮನ ಬಳಿಯೇ ಮುತ್ತುರಾಜ್ ಸಾಲ ಮಾಡಿದ್ದ.
ಒಂದುವರೆ ವರ್ಷದ ಹಿಂದೆ ೫೦ ಸಾವಿರ ಹಣ ಪಡೆದಿದ್ದ. ಸಾಲ ವಾಪಸ್ ಕೇಳಿ ಕೇಳಿ ಸಾಕಾಗಿ, ನಾಗಮ್ಮ ಬರೀ ಅಸಲು ಸಾಕು ಬಡ್ಡಿ ಬೇಡ ಎಂದಿದ್ದರು. ಆಗಲೇ ಮುತ್ತುರಾಜ್ ಆಕೆಯ ಚಿನ್ನದ ಮೇಲೆ ಕಣ್ಣು ಹಾಕಿದ್ದ. ಬಳಿಕ ಈ ರೀತಿ ಹತ್ಯೆ ಮಾಡಿ, ತನ್ನೂರಿನ ತೆಂಗಿನ ತೋಟದ ಮರದ ಪೊಟರೆಯಲ್ಲಿ ಚಿನ್ನ ಬಚ್ಚಿಟ್ಟಿದ್ದ. ಸದ್ಯ ಪೋಲೀಸರು ಆರೋಪಿಯನ್ನು ಬಂಧಿಸಿ, ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.




