ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ಇದೀಗ ಶಾಸಕರ ಭವನಕ್ಕೂ ತಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವನ್ನು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಸದನದಲ್ಲಿ ಪ್ರಸ್ತಾಪಿಸಿದರು.
ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಅವರು, “ಹೋಟೆಲ್‌ಗಳಲ್ಲಿ ತಿಂಡಿ ಸಿಗುತ್ತಿಲ್ಲ, ಶಾಸಕರ ಭವನದಲ್ಲಿಯೇ ಇಡ್ಲಿ, ದೋಸೆ ಲಭ್ಯವಿಲ್ಲ. ಶಾಸಕರ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು?” ಎಂದು ಪ್ರಶ್ನಿಸಿ ಸರ್ಕಾರದಿಂದ ಸ್ಪಷ್ಟನೆ ಕೋರಿದರು.
ಈ ವೇಳೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ವಿಷಯವನ್ನು ಉಲ್ಲೇಖಿಸಿ, ಸದಸ್ಯರು ಇಡ್ಲಿ, ವಡೆ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಹೀಗಾಗಿ ತಕ್ಷಣವೇ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮದ್, ಇಡ್ಲಿ ಸಿಗುತ್ತಿಲ್ಲ ಎಂಬುದಲ್ಲ, ಅಡುಗೆ ಮಾಡಲು ಗ್ಯಾಸ್ ಲಭ್ಯವಿಲ್ಲ ಹಾಗಾಗಿ ಸಮಸ್ಯೆ ಇದೆ ಎಂದು ಸ್ಪಷ್ಟಪಡಿಸಿದರು. ಇದರಿಂದ ಗ್ಯಾಸ್ ಕೊರತೆಯ ಗಂಭೀರತೆ ಮತ್ತಷ್ಟು ಬೆಳಕಿಗೆ ಬಂದಿದೆ.
ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯಮಯವಾಗಿ, 10 ನಿಮಿಷ ಕಾಲಾವಕಾಶ ಕೊಡ್ತೇನೆ, ತಿಂಡಿ ತಿಂದು ಬನ್ನಿ ಎಂದು ಹೇಳಿ ಸದನದಲ್ಲಿ ನಗೆ ಮೂಡಿಸಿದರು. ಆದರೆ, ಗ್ಯಾಸ್ ಕೊರತೆಯ ಸಮಸ್ಯೆ ತುರ್ತಾಗಿ ಪರಿಹಾರ ಕಾಣಬೇಕೆಂಬ ಒತ್ತಾಯ ಹೆಚ್ಚಾಗಿದೆ.




