ಅಹಿಂದ ದಾಳ ಉರುಳಿಸಿದ BJP; ‘ಕೈ’ ತಪ್ಪುತ್ತಾ ಕಾಂಗ್ರೆಸ್ ಕೋಟೆ?

ದಾವಣಗೆರೆ ದಕ್ಷಿಣ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿದೆ. ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಬಿಜೆಪಿ ಹೊಸ ತಂತ್ರ ರೂಪಿಸಿದ್ದು, ಅಹಿಂದ ಸಮುದಾಯದ ಮೇಲೆ ಕಣ್ಣು ನೆಟ್ಟಿದೆ. ಜಾತಿ ಲೆಕ್ಕಾಚಾರವೇ ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಸೂಚನೆ ನೀಡುತ್ತಿದೆ.

ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಮುಸ್ಲಿಂ ನಾಯಕರ ನಡುವಿನ ಟಿಕೆಟ್ ಪೈಪೋಟಿ ಇದೀಗ ಬಹಿರಂಗವಾಗಿ ತಲೆದೋರಿದೆ. ಈ ಒಳಜಗಳ ಪಕ್ಷಕ್ಕೆ ಸಂಕಷ್ಟ ತಂದಿದ್ದು, ಪ್ರತಿಸ್ಪರ್ಧಿ ಬಿಜೆಪಿ ಇದನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬಲಿಷ್ಠವಾಗಿರುವ ಈ ಕ್ಷೇತ್ರದಲ್ಲಿ, ಅಲ್ಪಸಂಖ್ಯಾತರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. “ಮತ ನಮ್ಮದು, ಆದರೆ ಅಧಿಕಾರ ಯಾಕೆ ಇಲ್ಲ?” ಎಂಬ ಪ್ರಶ್ನೆಯನ್ನು ಮುಸ್ಲಿಂ ಮುಖಂಡರು ಎತ್ತಿರುವುದು ರಾಜಕೀಯ ಸಮೀಕರಣವನ್ನು ಬದಲಾಯಿಸುವ ಸೂಚನೆ ನೀಡುತ್ತಿದೆ.

ಇದೇ ವೇಳೆ, ಬಿಜೆಪಿ ಅಹಿಂದ ಸಮುದಾಯದತ್ತ ಗಮನ ಹರಿಸಿದೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ ಅಹಿಂದ ಸಮುದಾಯದ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿ ಲೆಕ್ಕಾಚಾರ ಗಮನಿಸಿದರೆ, ಇಲ್ಲಿ ಅಹಿಂದ ಮತಗಳೇ ಪ್ರಮುಖವಾಗಿವೆ. ಒಟ್ಟು 2,31,674 ಮತದಾರರಿದ್ದಾರೆ. ಇವರಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ – 64,246, ಲಿಂಗಾಯತರು – 37,845, ಎಸ್‌ಟಿ – 31,729, ಎಸ್‌ಸಿ – 29,106, ಕುರುಬ – 16,854, ಮರಾಠರು – 14,868, ಉಪ್ಪಾರರು – 8,352, ಜೈನರು – 5,386 ಹಾಗೂ ಇತರ ಸಮುದಾಯಗಳ 23,300 ಮತಗಳಿವೆ. ಹಾಗಾಗಿ ಈ ಲೆಕ್ಕಾಚಾರದಲ್ಲಿ ಅಹಿಂದ ಸಮುದಾಯವೇ ನಿರ್ಣಾಯಕವಾಗಿದ್ದು, ಈ ಬಾರಿ ಚುನಾವಣೆಯ ದಿಕ್ಕು ತಿರುಗಿಸುವ ಸಾಮರ್ಥ್ಯ ಹೊಂದಿದೆ.

ವರದಿ : ಲಾವಣ್ಯ ಅನಿಗೋಳ

About The Author