ದಾವಣಗೆರೆಯಲ್ಲಿ ಗೆದ್ದು ಬೀಗಿದ ಶಾಮನೂರು ಕುಡಿ!

ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್‌ ಶಾಮನೂರು ಕೊನೆಗೂ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶದೊಂದಿಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.

ಇನ್ನು ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಶಾಮನೂರು ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ವಿರುದ್ಧ 4967 ಮತಗಳ ಅಂತರದಿಂದ ಗೆದ್ದಿದ್ದು, 20ನೇ ಸುತ್ತಿನ ಎಣಿಕೆ ಬಳಿಕ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಮತದಾನ ಆರಂಭಗೊಂಡ ಮೊದಲ 6 ಸುತ್ತಿನಲ್ಲಿಯೂ ಸಮರ್ಥ್ ಶಾಮನೂರು ಹಿನ್ನಡೆ ಕಾಯ್ದುಕೊಂಡಿದ್ದು, 7ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. ಆದರೆ 8 ಹಾಗೂ 9ನೇ ಸುತ್ತಿನಲ್ಲಿ ಅಂಕಿ-ಸಂಖ್ಯೆ ಉಲ್ಟಾ ಆಗಿದೆ. ಕೊನೆಗೆ ಈ ರಣಕಣದಲ್ಲಿ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​ ಶಾಮನೂರು ಪಾಲಾಗಿದೆ.

ಇನ್ನು ಸಮರ್ಥ್ ಶಾಮನೂರು ಗೆಲುವಿನ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗಿವೆ. ಹೀಗಾಗಿಯೇ ಇದಕ್ಕೆ ಕಾರಣರಾದ ಮುಖಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ‌‌ ಮುಖಂಡ ಅಮಾನತ್ತನ್ನು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

About The Author