ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವ ಹುಚ್ಚಾಟಕ್ಕೆ ಮತ್ತೊಂದು ಪ್ರಾಣ ಬಲಿಯಾಗಿರುವ ದುರ್ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಅಪ್ರಾಪ್ತ ಬಾಲಕನ ಜೊತೆಗೆ ಆತನ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 19ರಂದು ಹುಬ್ಬಳ್ಳಿಯ ಶೇಜವಾಡ್ಕರ್ ಪ್ಲಾಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಲಕ್ಷ್ಮಿ ನಗರ ನಿವಾಸಿ ನಮೀಷ್ ಸಂಗಳದ್ ಮೃತ ಬಾಲಕನಾಗಿದ್ದು, ಯುಗಾದಿ ಹಬ್ಬದ ದಿನ ಸ್ನೇಹಿತರೊಂದಿಗೆ ರೀಲ್ಸ್ ಚಿತ್ರೀಕರಣಕ್ಕೆ ತೆರಳಿದ್ದನು. ಈ ವೇಳೆ ಸ್ಕೂಟಿಯ ಮೇಲೆ ಇದ್ದ ನಮೀಷ್ಗೆ, 17 ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ, ನಾಲ್ವರು ಬಾಲಕರು ಸೇರಿ ‘ಕ್ರ್ಯಾಶ್ ರೀಲ್ಸ್’ ಮಾಡುವ ಉದ್ದೇಶದಿಂದ ಈ ಅಪಾಯಕಾರಿ ಸ್ಟಂಟ್ಗೆ ಮುಂದಾಗಿದ್ದರು. ಸ್ಕೂಟಿ ಮತ್ತು ಕಾರು ಎರಡೂ ವೇಗವಾಗಿ ಸಂಚರಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಜೊತೆಗೆ, ಅಪ್ರಾಪ್ತ ಮಗನಿಗೆ ಕಾರು ನೀಡಿದ್ದ ಆರೋಪದಲ್ಲಿ ತಂದೆ ನಾಗರಾಜ್ ರಾಯ್ಕರ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ N. ಶಶಿಕುಮಾರ್, ರೀಲ್ಸ್ ಮಾಡುವ ಹುಚ್ಚಾಟಕ್ಕೆ ಜೀವ ಪಣಕ್ಕಿಡಬಾರದು. ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಈ ದುರ್ಘಟನೆ ಸಾಮಾಜಿಕ ಜಾಲತಾಣಗಳ ಅತಿಯಾದ ಪ್ರಭಾವ ಮತ್ತು ಅಜಾಗರೂಕತೆಯ ವಿರುದ್ಧ ಮತ್ತೊಮ್ಮೆ ಎಚ್ಚರಿಕೆ ನೀಡಿದಂತಾಗಿದೆ.
ವರದಿ : ಲಾವಣ್ಯ ಅನಿಗೋಳ




