ಬೆಂಗಳೂರು ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. 2022ರಲ್ಲಿ ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಮಾರ್ಚ್ 25ರಿಂದಲೇ ನಗರದಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಅಸಮರ್ಪಕ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ GBA ಸಹಯೋಗದಲ್ಲಿ ನಡೆಯಲಿದ್ದು, ಪ್ರತಿ ಪಾಲಿಕೆ ವ್ಯಾಪ್ತಿಗೆ ಎರಡು ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ನಿಯೋಜಿಸಲಾಗಿದೆ. ಟೋಯಿಂಗ್ ಕಾರ್ಯವನ್ನು ಜಿಬಿಎ ಸಿಬ್ಬಂದಿ ನಿರ್ವಹಿಸಲಿದ್ದು, ಸಂಚಾರಿ ಪೊಲೀಸರು ದಂಡ ವಿಧಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ನೋ ಪಾರ್ಕಿಂಗ್ ಉಲ್ಲಂಘನೆಗೆ ಈಗಾಗಲೇ 500 ರೂ. ದಂಡ ನಿಗದಿ ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ವಾಹನಗಳ ಆಧಾರದಲ್ಲಿ ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 650 ರೂ. ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದ್ದು, ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್ ಚಾರ್ಜ್ ನಿಗದಿ ಮಾಡಲಾಗಿದೆ.
ಹಿಂದಿನಂತೆ ಟೋಯಿಂಗ್ ವೇಳೆ ಸಾರ್ವಜನಿಕರು ಮತ್ತು ಸಿಬ್ಬಂದಿ ನಡುವೆ ಗಲಾಟೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಟೋಯಿಂಗ್ ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಜೊತೆಗೆ ಟೋಯಿಂಗ್ ಸಿಬ್ಬಂದಿಗೆ ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯಗೊಳಿಸಲಾಗಿದೆ. ನಗರದಲ್ಲಿ ಅಸಮರ್ಪಕ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ನಿಯಂತ್ರಣ ಮತ್ತು ಶಿಸ್ತಿನ ಪಾಲನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ವರದಿ : ಲಾವಣ್ಯ ಅನಿಗೋಳ




