Mandya News: ಮಂಡ್ಯ: ಮಂಡ್ಯದ ಪಾಂಡವರಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವೈರಮುಡಿ ಬ್ರಹ್ಮೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಗರುಡದೇವ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಮತ್ತು ಭಕ್ತರನ್ನು ಆಹ್ವಾನಿಸುತ್ತಾನೆಂಬ ಸಂಪ್ರದಾಯವಿದ್ದು, ಬ್ರಹ್ಮೋತ್ಸವದ ಮೊದಲ ದಿನ ಗರುಡ ದ್ವಜಾರೋಹಣ ನೆರವೇರಿಸಲಾಯಿತು.
ಚೆಲುವನಾರಾಯಣಸ್ವಾಮಿಯವರೊಂದಿಗೆ ಗರುಡಪಟದ ಉತ್ಸವ ನಡೆದ ನಂತರ ಗರುಡನಾಮ ಪಾರಾಯಣ ಮಾಡಿ ಚಿನ್ನದ ದ್ವಜ ಸ್ತಂಭದ ಮೇಲೆ ಗರುಡ ಧ್ವಜಾರೋಹಣ ಮಾಡಲಾಯಿತು.
ಪುಷ್ಪಾಲಂಕೃತ ಮಂಟಪ ವಾಹನೋತ್ಸವದಲ್ಲಿ ಚೆಲುವನಾರಾಯಣನಿಗೆ ಉತ್ಸವ ನೆರವೇರಿಸಲಾಗಿದ್ದು, ನಾಡಿನ ವಿವಿಧ ಕಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾರ್ಚ್ 28ರಂದು ಚೆಲುವನಾರಾಯಣಸ್ವಾಮಿಗೆ ವೈರಮುಡಿ ಉತ್ಸವ ನಡೆಯಲಿದೆ ಮಾರ್ಚ್ 31ರಂದು ಮಹಾರಥೋತ್ಸವ ನಡೆಯಲಿದ್ದು, ಏಪ್ರಿಲ್ ಒಂದರಂದು ಕಲ್ಯಾಣಿ, ಎರಡರಂದು ತೀರ್ಥ ಸ್ಥಾನ ಮತ್ತು ಪಟ್ಟಾಭಿಷೇಕ ಮಹೋತ್ಸವಗಳು ನೆರವೇರಲಿದೆ. ಜಾತ್ರಾ ಮಹೋತ್ಸವಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ.




