Davanagere: ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದೆ.
ಹೀಗಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಮನೆಯೊಂದು ಮೂರು ಬಾಗಿಲಾಗಿದ್ದ ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ.
ಹೌದು…ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಯಿಂದಲೇ ಸೋಲಾಗಿದೆ ಎಂದು ಜಿಎಂ ಸಿದ್ದೇಶ್ವರ್ ಬಹಿರಂಗವಾಗಿಯೇ ಬಿಎಸ್ ಯಡಿಯೂರಪ್ಪ ಬಣದ ವಿರುದ್ಧ ಆರೋಪಿಸಿದ್ದರು. ಅಲ್ಲದೇ ಬಿಎಸ್ವೈ ಬಣದ ವಿರುದ್ಧವೇ ತಮ್ಮದೇಯಾದ ಟೀಮ್ ಕಟ್ಟಿ ಬಹಿರಂಗ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು.
ಖುದ್ದು ರಾಜ್ಯ ಬಿಜೆಪಿ ಉಸ್ತುವಾರಿ ಮನವೊಲಿಕೆಗೂ ಸಿದ್ದೇಶ್ವರ್ ಕ್ಯಾರೇ ಎಂದಿರಲಿಲ್ಲ, ಆದ್ರೆ, ಇದೀಗ ಏಕಾಏಕಿ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜತೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಒಂದೆಡೆ ಎಂಪಿ ರೇಣುಕಾಚಾರ್ಯ ಇನ್ನೊಂದೆಡೆ ಜಿಎಂ ಸಿದ್ದೇಶ್ವರ್ ಮಧ್ಯದಲ್ಲಿ ವಿಜಯೇಂದ್ರ ನಿಂತುಕೊಂಡು ಕೈ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿರುವುದು ವಿಶೇಷವಾಗಿದೆ.




