Health Tips: ಬೇಸಿಗೆ ಬಂದ್ರೆ ಸಾಕು ಜನ ದೇಹಕ್ಕೆ ತಂಪು ನೀಡುವ ಪೇಯ, ಹಣ್ಣು, ಪದಾರ್ಥಗಳ ಸೇವನೆಗೆ ಮುಂದಾಗುತ್ತಾರೆ. ರಾಗಿ ಅಂಬಲಿ, ಪಾನಕ, ಜ್ಯೂಸ್, ಕಲ್ಲಂಗಡಿ, ಸೌತೇಕಾಯಿ, ಎಳನೀರು ಹೀಗೆ ದೇಹಕ್ಕೆ ತಂಪು ನೀಡು, ಕೂಲ್ ಎನ್ನಿಸುವ ಹಣ್ಣು-ಪಾನೀಯ ಸೇವನೆ ಮಾಡುತ್ತಾರೆ. ಇದರ ಜತೆಗೆ ಮಜ್ಜಿಗೆ ಕೂಡ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕೆಲವರು ಮಜ್ಜಿಗೆ ಬರೀ ಪೇಯವಲ್ಲ ಬದಲಾಗಿ ಇದು ಅಮೃತವಿದ್ದಂತೆ. ವ್ಯಕ್ತಿಯ ಆರೋಗ್ಯವನ್ನು, ಜೀರ್ಣ ಶಕ್ತಿಯನ್ನು ವೃದ್ಧಿಸಿ, ಮನುಷ್ಯ ರೋಗಗಳಿಂದ ದೂರವಾಗಿಡುವಂತೆ ಮಾಡುತ್ತದೆ ಎನ್ನುತ್ತಾರೆ. ಹಾಗಾದ್ರೆ ಬೇಸಿಗೆಯಲ್ಲಿ ನಾವೇಕೆ ಮಜ್ಜಿಗೆ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಮಜ್ಜಿಗೆ ಸೇವನೆ ಮಾಡುವುದರಿಂದ ಜೀರ್ಣಶಕ್ತಿ ಚೆನ್ನಾಗಿರುತ್ತದೆ. ಆದರೆ ಬೆಳಿಗ್ಗೆ ತಿಂಡಿ ಬಳಿಕ ಮತ್ತು ಮಧ್ಯಾಹ್ನ ಊಟವಾದ ಬಳಿಕ ಮಜ್ಜಿಗೆ ಸೇವನೆ ಮಾಡಬಹುದು. ರಾತ್ರಿ ಮಜ್ಜಿಗೆ ಸೇವನೆ ಅಷ್ಟು ಉತ್ತಮವಲ್ಲ. ಏಕೆಂದರೆ, ಸೂರ್ಯನ ಶಾಖವಿರುವ ಸಮಯ ಮಾತ್ರ ನಾವು ತಂಪು ಆಹಾರ ಸೇವನೆ ಮಾಡಬೇಕು. ಬಳಿಕ ಮಾಡಿದರೆ, ಅದು ಆರೋಗ್ಯದ ಬದಲು ಅನಾರೋಗ್ಯ ತಂದಿಡುತ್ತದೆ. ಹಾಗಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಾತ್ರ ನೀವು ಮಜ್ಜಿಗೆ ಸೇವನೆ ಮಾಡಬಹುದು.
ದೇಹದಲ್ಲಿ ಉಷ್ಣತೆ ಹೆಚ್ಚಾದ್ರೆ, ಮುಖದ ಮೇಲೆ ಗುಳ್ಳೆ, ತಲೆಗೂದಲು ಉದುರುವಿಕೆ ಸೇರಿ ಹಲವು ಸಮಸ್ಯೆ ಉದ್ಭವಿಸುತ್ತದೆ. ಅಂಥ ಸಮಸ್ಯೆ ಉದ್ಭವಿಸಬಾರದು. ದೇಹ ತಂಪಾಗಿರಬೇಕು ಅಂದ್ರೆ ನೀವು ಮಜ್ಜಿಗೆ ಸೇವನೆ ಮಾಡಬೇಕು.
ಇನ್ನು ದೇಹದಲ್ಲಿ ಶಕ್ತಿ ಇಲ್ಲವೆಂದಲ್ಲಿ ನೀವು ಮಜ್ಜಿಗೆ ಸೇವನೆ ಮಾಡಬಹುದು. ಅದರಲ್ಲೂ ಕುಚಲಕ್ಕಿ ಮಾಡಿದ ತಿಳಿಗೆ ಸ್ವಲ್ಪ ಮಜ್ಜಿಗೆ ಸೇರಿಸಿ, ಕುಡಿದರೆ, ತಕ್ಷಣ ಶಕ್ತಿ ಬರುತ್ತದೆ.
ಹಾಗಂತ ನೀವು ಮಜ್ಜಿಗೆಗೆ ಹಸಿಮೆಣಸು, ಮಸಾಲೆ ಪದಾರ್ಥ ಹಾಕಿ ಮಜ್ಜಿಗೆ ಕುಡಿದರೆ ಲಾಭವಿಲ್ಲ. ಅದರ ಬದಲು, ಉಪ್ಪು, ಶುಂಟಿ, ಪುದೀನಾ, ಉಪ್ಪು, ಜೀರಿಗೆ ಸೇರಿಸಿ ಸೇವಿಸಬೇಕು.




