Uttara Kannanda: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈಗ ಹೊಸದೊಂದು ರಾಜಕೀಯ ಸಂಚಲನ ಶುರುವಾಗಿದೆ. 2023ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರೂ, ಇಂದಿಗೂ ಕ್ಷೇತ್ರದ ಜನರ ಮನ ಗೆದ್ದಿರುವ ಮಾಜಿ ಶಾಸಕ ವಿ.ಎಸ್. ಪಾಟಿಲ್ ಈಗ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರಾ? ಶಿವರಾಂ ಹೆಬ್ಬಾರ್ ಅವರ ಕಾಂಗ್ರೆಸ್ ಒಲವು ಪಾಟಿಲ್ ಅವರ ಮುಂದಿನ ದಾರಿಯನ್ನು ಬದಲಿಸಲಿದೆಯಾ? ಅವರೇ ಹೇಳಿದ ಈ ಸ್ಫೋಟಕ ಮಾತುಗಳ ಹಿಂದಿನ ಮರ್ಮವೇನು? ಈ ಬಗ್ಗೆ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಯಲ್ಲಾಪುರ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಇತ್ತೀಚೆಗೆ ವಿ.ಎಸ್. ಪಾಟಿಲ್ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಮಾತುಗಳನ್ನು ಆಡಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡುವಾಗಲೇ ಕಾಂಗ್ರೆಸ್ ಹೈಕಮಾಂಡ್ ತಮಗೆ ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಿಲ್ಲ ಎಂದು ಮೊದಲೇ ಹೇಳಿತ್ತು ಎಂಬ ಅಂಶವನ್ನೀಗ ಅವರು ಸ್ಮರಿಸಿಕೊಂಡಿದ್ದಾರೆ. ಆದರೆ, ಇದೀಗ ಅವರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿರುವುದು ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆ. ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿದ ಬಗ್ಗೆ ಪಾಟಿಲ್ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಪ್ರಸಕ್ತ ಶಾಸಕ ಶಿವರಾಂ ಹೆಬ್ಬಾರ್ ಅವರ ಪ್ರಭಾವ ಮತ್ತು ಅವರ ಕಾಂಗ್ರೆಸ್ ಒಲವಿನ ಬಗ್ಗೆಯೂ ಪಾಟಿಲ್ ಮೌನ ಮುರಿದಿದ್ದಾರೆ. ಹೆಬ್ಬಾರ್ ಅವರ ಪುತ್ರ ಪಕ್ಷ ಸೇರಿರುವುದು ಮತ್ತು ಅವರಿಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಮಾತನಾಡಿದ ಪಾಟಿಲ್, “ರಾಜಕೀಯದಲ್ಲಿ ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ವಿಶೇಷವೆಂದರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಂ ಹೆಬ್ಬಾರ್ ಅವರಿಗೆ ಸಮಬಲದ ಪೈಪೋಟಿ ನೀಡಬಲ್ಲ ಏಕೈಕ ನಾಯಕ ಎಂದರೆ ಅದು ವಿ.ಎಸ್. ಪಾಟಿಲ್ ಮಾತ್ರ ಎಂಬುದು ಕ್ಷೇತ್ರದ ಜನರ ಮಾತು. ಒಂದು ವೇಳೆ ಸರ್ವೇ ವರದಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಇವರನ್ನು ಕಡೆಗಣಿಸಿದರೆ, ಪಾಟಿಲ್ ಅವರ ಮುಂದಿನ ದಾರಿ ಯಾವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ವಿ.ಎಸ್. ಪಾಟಿಲ್ ಕೇವಲ ಒಬ್ಬ ಮಾಜಿ ಶಾಸಕ ಮಾತ್ರವಲ್ಲ, ಅವರು ಜಿಲ್ಲೆಯ ಪ್ರಭಾವಿ ಲಿಂಗಾಯತ ಮುಖಂಡರೂ ಹೌದು. ಬೂತ್ ಮಟ್ಟದಿಂದಲೂ ಅವರಿಗೆ ಗಟ್ಟಿಯಾದ ಬೆಂಬಲಿಗರ ಪಡೆಯಿದೆ. “ನನ್ನನ್ನು ನಂಬಿ ಬಂದಿರುವ ಕಾರ್ಯಕರ್ತರಿಗೆ ಈಗಿನ ಪರಿಸ್ಥಿತಿಯಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪಕ್ಷ ತಮ್ಮನ್ನು ಮತ್ತು ತಮ್ಮ ಬೆಂಬಲಿಗರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ, ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಕಠಿಣ ನಿರ್ಧಾರ ಕೈಗೊಳ್ಳುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.
ಒಟ್ಟಿನಲ್ಲಿ, ಯಲ್ಲಾಪುರ ರಾಜಕೀಯದಲ್ಲಿ ಈಗ ವಿ.ಎಸ್. ಪಾಟಿಲ್ ಅವರ ನಡೆ ಒಂದು ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡುತ್ತಿದೆ. ಹೈಕಮಾಂಡ್ ಇವರನ್ನು ಸಮಾಧಾನಪಡಿಸುತ್ತಾ? ಅಥವಾ ಇವರು ಬೆಂಬಲಿಗರ ಒತ್ತಾಯಕ್ಕೆ ಮಣಿದು ಪರ್ಯಾಯ ಹಾದಿ ತುಳಿಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.




