Political News: ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ: CM Siddaramaiah

Political News: ಸದ್ಯ ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಿಎಂ ಸಿದ್ದರಾಮಯ್ಯನವರು, ದಾವಣಗೆರೆಯಲ್ಲಿಂದು ಸಮರ್ಥ್ ಪರ ಪ್ರಚಾರ ಮಾಡಿದ್ದು, ತಮ್ಮ ಸರ್ಕಾರ ಮಾಡಿರುವ ಸಾಧನೆ ಬಗ್ಗೆ ಹೇಳಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರೂ, ನಮ್ಮ ಗ್ಯಾರಂಟಿಗಳು ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ ₹52,000 ಕೋಟಿ ಮೀಸಲಿಟ್ಟಿದ್ದು, ಇದುವರೆಗೆ ₹1,31,000 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರ ಮಿತಿಯೊಳಗೆ ಸಾಲ ಮಾಡಬೇಕು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದಂತೆ, ರಾಜ್ಯದ ಜಿಡಿಪಿಯ ಶೇ. 25 ರ ಮಿತಿಯೊಳಗೆ ಸಾಲದ ಮೊತ್ತವಿದೆ. ನಮ್ಮ ವಿತ್ತೀಯ ಕೊರತೆ 2.95 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಬದ್ಧ ಅನುದಾನಗಳು ಬರದ ಕಾರಣ, ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಲಿಲ್ಲ. ಬಿಹಾರ ಚುನಾವಣೆಯ ಸಂಬಂಧ ಜಿಎಸ್‌ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ₹10,000 ಕೋಟಿ ನಷ್ಟವಾಗಿದೆ. ಜಿಎಸ್‌ಟಿ ಕಡಿತದ ಮುಂಚೆ 10% ಇದ್ದ ಜಿಎಸ್‌ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರವನ್ನು ಮತ್ತು ವಿಶೇಷ ಅನುದಾನಗಳನ್ನು ನೀಡದ ಕಾರಣ ಬಜೆಟ್ ರೆವಿನ್ಯೂ ಸರ್ಪ್ಲಸ್ ಆಗಲು ಸಾಧ್ಯವಾಗಿಲ್ಲ. ಆರ್ಥಿಕತೆಗೆ ಶ್ವೇತಪತ್ರ ಮಂಡಿಸಬೇಕು ಎಂದು ಹೇಳುವ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಈ ಎಲ್ಲ ಅಂಶಗಳನ್ನು ಪರಿಶೀಲಿಸದೇ, ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

About The Author