Dharwad News: ಧಾರವಾಡ: ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕಳೆದ ಎಂಟು ವರ್ಷಗಳಿಂದ ಸಿಲುಕಿ ಒದ್ದಾಡುತ್ತಿದ್ದಾರೆ. ಇದೇ ಏಪ್ರಿಲ್ 15ರಂದು ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಲಿದೆ. ಆದರೆ, ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪು ಪ್ರಕಟದ ಹೊತ್ತಲ್ಲೇ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿದ್ದು, ಯೋಗೇಶ್ ಗೌಡ ಸಹೋದರ ಹಾಗೂ ಸಹೋದರಿಯರ ಹೊಡೆದಾಡಿಕೊಂಡಿದ್ದಾರೆ.
ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಕಲಹ
ಇದೇ ಏಪ್ರಿಲ್ 15 ರಂದು ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗಲಿದೆ. ಕೊಲೆ ಪ್ರಕರಣದ ಟ್ರಯಲ್ ನಡೆಸಿ ತೀರ್ಪು ಕಾಯ್ದಿರಿಸಿರುವ ಕೋರ್ಟ್ ಏಪ್ರಿಲ್ 15ಕ್ಕೆ ತೀರ್ಪು ಪ್ರಕಟಿಸಲಿದೆ. ಈ ಹೊತ್ತಲ್ಲೇ ಮೃತ ಯೋಗೇಶ್ ಗೌಡ ಸಹೋದರ ಹಾಗೂ ಸಹೋದರಿಯರ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ ಸಹೋದರ ಹಾಗೂ ಸಹೋದರಿಯರ ನಡುವಿನ ಸಂಭಾಷಣೆ ಆಡಿಯೋ ಮತ್ತು ಹೊಡೆದಾಡಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
ರಾಡ್, ವೈಯರ್ ನಿಂದ ಸಹೋದರಿಯರಿಗೆ ಥಳಿಸಿದ ಗುರುನಾಥ್ ಗೌಡ
ಧಾರವಾಡ ತಾಲೂಕಿನ ಗೋವಿನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಈ ಗಲಾಟೆ ನಡೆದಿದೆ. ಮೃತ ಯೋಗೇಶ್ ಗೌಡ ಸಹೋದರ ಗುರುನಾಥ್ ಗೌಡ, ಸಹೋದರಿಯರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಬ್ಬಿಣದ ರಾಡ್ ಮತ್ತು ವೈಯರ್ನಿಂದ ಸಹೋದರಿಯಾದ ಜಗದೀಶ್ವರಿ ಮತ್ತು ಅಕ್ಕಮಹಾದೇವಿಗೆ ಗುರುನಾಥ್ ಗೌಡ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೂಡ ದಾಖಲಾಗಿದೆ.




