ಜಾಹೀರಾತಿನಿಂದ ನಗರ ಅಭಿವೃದ್ಧಿಯಾಗುವುದಿಲ್ಲ: ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಆರ್.ಅಶೋಕ್ ಕಿಡಿ

Political News: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ರಾಶಿ ಬಿದ್ದಿದೆ. ಸಿಲಿಕಾನ್ ಸಿಟಿ ಗಬ್ಬೆದ್ದು ನಾರುತ್ತಿದೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಬಿಟ್ಟು ಇವ್ಯಾವುದೂ ಕಾಣುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಐಟಿ ರಾಜಧಾನಿ, ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ನಮ್ಮ ಬೆಂಗಳೂರು ಇಂದು ಕಸದ ಗುಡ್ಡವಾಗಿ ಮಾರ್ಪಟ್ಟಿದೆ. ಜಿಬಿಎ ಮುಖ್ಯ ಕಚೇರಿಯಿಂದ ಕೂಗಳತೆ ದೂರದಲ್ಲರುವ ರಸ್ತೆಯಲ್ಲೇ 30 ದಿನಕ್ಕೊಮ್ಮೆ ಕಸ ವಿಲೇವಾರಿ ಎನ್ನುವ ಸ್ಥಿತಿ ಬಂದಿರುವುದು, ಬೆಂಗಳೂರಿನ ಆಡಳಿತ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಇದೇನಾ ನಿಮ್ಮ “ಬ್ರ್ಯಾಂಡ್ ಬೆಂಗಳೂರು”? ನಿಮ್ಮ ಭರವಸೆಗಳು, ಯೋಜನೆಗಳು ಎಲ್ಲಿಗೆ ಹೋಯಿತು? GBA ಸಂಪೂರ್ಣವಾಗಿ ನಿಷ್ಕ್ರಿಯವಾಗಿ ಆಡಳಿತ ಅಸ್ತವ್ಯಸ್ತವಾಗಿದೆ. ಈ ಕಸದ ರಾಶಿಗಳು ಕೇವಲ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿಲ್ಲ. ನೀವು ಬಿಟ್ಟಿರುವ ಕಸದ ರಾಶಿಯ ಸಾಕ್ಷಿ ಗುಡ್ಡೆಗಳು, ಬಿರು ಬೇಸಿಗೆಯಲ್ಲಿ ರೋಗಗಳ ಆವಾಸ ಸ್ಥಳವಾಗುವ ಅಪಾಯ ಎದುರಾಗಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಡೆಂಗ್ಯೂ, ವೈರಲ್ ಸೋಂಕುಗಳ ಭೀತಿ ನಡುವೆ ನಾಗರಿಕರು ಬದುಕಬೇಕಾದ ಪರಿಸ್ಥಿತಿ ಬಂದಿದೆ. ಜನರ ಆರೋಗ್ಯ, ಸ್ವಚ್ಛತೆ ಬಗ್ಗೆ ನಿಮ್ಮ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲವೇ? ಕುರ್ಚಿ ಕಚ್ಚಾಟ ಬಿಡಿ, ಮೊದಲು ನಗರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ. ಜಾಹೀರಾತುಗಳಿಂದ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರಿನ ಜನತೆ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author