ದಕ್ಷಿಣ ಕನ್ನಡ ಜಿಲ್ಲೆಯಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಕಾಡಾನೆಗಳ ದಾಳಿ ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದಲ್ಲದೆ, ಗ್ರಾಮಸ್ಥರ ಪ್ರಾಣಕ್ಕೂ ಅಪಾಯಕಾರಿಯಾಗಿವೆ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಈಗಾಗಲೇ “ಆನೆಪಡೆ”ಯನ್ನು ಕಾರ್ಯಾಚರಣೆಗೆ ಇಳಿಸಿದ್ದರೂ, ಕಾಡಾನೆಗಳ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸವಾಲು ಎದುರಾಗಿದೆ. ಆನೆಪಡೆ ಕಾರ್ಯಾಚರಣೆ ನಡೆಯುತ್ತಿರುವ ಮಧ್ಯೆಯೇ ಕಡಬ ತಾಲೂಕಿನ ಕೋಡಿಂಬಾಳ ಪ್ರದೇಶದ 102 ನೆಕ್ಕಿಲಾಡಿ, ಕೋರಿಯರ್ ಸಮೀಪದ ಕುಮಾರಧಾರಾ ನದಿ ತೀರದಲ್ಲಿ 8 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.
ಗುಂಪಾಗಿ ಸಂಚರಿಸುತ್ತಿದ್ದ ಆನೆಗಳ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸುಬ್ರಹ್ಮಣ್ಯ ಹಾಗೂ ಪಂಜ ವಲಯದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಕಾಡಾನೆಗಳ ಚಲನವಲನವನ್ನು ನಿಗಾ ವಹಿಸುತ್ತಾ, ಅವುಗಳನ್ನು ಸುರಕ್ಷಿತವಾಗಿ ಅರಣ್ಯದತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡಾನೆಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಗ್ರಾಮೀಣ ಭಾಗದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




