ಯುವಕರಿಗೆ ಉದ್ಯೋಗ ಭಾಗ್ಯ; ಸರ್ಕಾರದಿಂದ ಗ್ರೀನ್ ಸಿಗ್ನಲ್!

ಮಂಡ್ಯ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ತಿರುವು ಸಿಕ್ಕಿದ್ದು, ಬಹು ನಿರೀಕ್ಷಿತ ಕೈಗಾರಿಕಾ ಹಬ್ ಸ್ಥಾಪನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ಸಾಧ್ಯತೆ ಇದೆ.

ಇದುವರೆಗೆ ಮಂಡ್ಯ ಕಾಂಗ್ರೆಸ್ ಶಾಸಕರು ಮತ್ತು ಕೇಂದ್ರ ಸಚಿವ H. D. ಕುಮಾರಸ್ವಾಮಿ ನಡುವೆ ನಡೆಯುತ್ತಿದ್ದ ಭೂಮಿ ಒದಗಿಸುವ ಕುರಿತ ಜಟಾಪಟಿಗೆ ಈಗ ತೆರೆ ಬಿದ್ದಿದೆ. ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೈಗಾರಿಕಾ ಯೋಜನೆಗಾಗಿ ಭೂಮಿ ಒದಗಿಸುವ ವಿಷಯವಾಗಿ H. D. ಕುಮಾರಸ್ವಾಮಿ, ರಾಜ್ಯ ಕೈಗಾರಿಕಾ ಸಚಿವ M. B. ಪಾಟೀಲ್ ಹಾಗೂ ಮಂಡ್ಯ ಶಾಸಕ ರವಿಕುಮಾರ್ ಗಣಿಗ ನಡುವೆ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ಮಂಡ್ಯದಲ್ಲಿ ಬೃಹತ್ ಕೈಗಾರಿಕಾ ವಲಯ ಹಾಗೂ ಟೆಸ್ಟಿಂಗ್ ಸೆಂಟರ್ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ.

ಮಂಡ್ಯದಲ್ಲಿ ಮೊದಲ ಹಂತದಲ್ಲಿ ಸುಮಾರು 750 ಕೋಟಿ ರೂಪಾಯಿ ವೆಚ್ಚದಲ್ಲಿ ARAI ಟೆಸ್ಟಿಂಗ್ ಸೆಂಟರ್ ಸ್ಥಾಪಿಸಲಾಗುತ್ತದೆ. ದೇಶದಲ್ಲಿ ಇಂತಹ ಕೇಂದ್ರಗಳು ಕೆಲವೇ ಕಡೆ ಇದ್ದು, ಇದು ಅಂತಾರಾಷ್ಟ್ರೀಯ ಮಟ್ಟದ ಐದನೇ ಕೇಂದ್ರವಾಗಲಿದೆ.

ಈ ಯೋಜನೆಯ ಸುತ್ತಮುತ್ತ ಕೈಗಾರಿಕೆಗಳು ಬೆಳೆಯುವ ಮೂಲಕ ಸುಮಾರು 25,000 ಮಂದಿಗೆ ನೇರ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ. ಇದು ಮಂಡ್ಯ ಯುವಕರಿಗೆ ದೊಡ್ಡ ಅವಕಾಶವಾಗಲಿದೆ. ಆರಂಭದಲ್ಲಿ 100 ಎಕರೆ ಜಾಗದ ಪ್ರಸ್ತಾಪವಿದ್ದರೂ, ಇದೀಗ 500 ರಿಂದ 1,000 ಎಕರೆ ಜಾಗದ ಅಗತ್ಯವಿದೆ ಎಂದು ತಿಳಿಸಲಾಗಿದೆ. ಇದಕ್ಕೆ ಸಚಿವ M. B. ಪಾಟೀಲ್ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.

ವರದಿ: ಲಾವಣ್ಯ ಅನಿಗೋಳ

 

About The Author