ಮಗ ತನ್ನಂತಿಲ್ಲ ಅಂತ ಮಗುವನ್ನ ಕೊಂದು ನದಿಗೆ ಎಸೆದ ಪಾಪಿ ತಂದೆ!

ತಾನು ಈ ಮಗುವಿನ ತಂದೆಯೇನಾ ಎಂಬ ಅನುಮಾನದಲ್ಲಿ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನೇ ಹತ್ಯೆ ಮಾಡಿ ಕೃಷ್ಣಾ ನದಿಗೆ ಎಸೆದ ಅಮಾನವೀಯ ಘಟನೆ ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದಲ್ಲಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರ ಸಿದ್ಧಾರ್ಥ್ (6) ಈ ದುರ್ಘಟನೆಯ ಬಲಿಯಾಗಿದ್ದಾನೆ. ಮಗು ತನ್ನ ಹೋಲಿಕೆಯಾಗಿಲ್ಲ ಎಂಬ ಅನುಮಾನದಿಂದ ತಂದೆ ಮಲ್ಲಿಕಾರ್ಜುನ ಮನಸ್ಸಿನಲ್ಲಿ ವಿಷಬೀಜ ಬಿತ್ತಿಕೊಂಡಿದ್ದ. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಚಾರಕ್ಕೆ ದಂಪತಿಯ ನಡುವೆ ನಿರಂತರ ಕಲಹ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಮಾರ್ಚ್ 16ರಂದು ಮಗನನ್ನು ಶಾಲೆಗೆ ದಾಖಲಿಸಲು ಕರೆದುಕೊಂಡು ಹೋಗುವುದಾಗಿ ಪತ್ನಿಗೆ ಹೇಳಿದ ಮಲ್ಲಿಕಾರ್ಜುನ, ಮಗನಿಗೆ ಹೊಸ ಬಟ್ಟೆ ತೊಡಿಸಿ ವಿಜಯಪುರದಿಂದ ಮಹಾರಾಷ್ಟ್ರದ ಕರಾಡ್‌ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕರಾಡ್ ತಾಲೂಕಿನ ವಡೋಲಿ ಭಿಕೇಶ್ವರ ಸಮೀಪದ ಕೃಷ್ಣಾ ನದಿಯ ದಡಕ್ಕೆ ಕರೆದೊಯ್ದು, ಕಿಂಚಿತ್ತೂ ಕರುಣೆ ತೋರದೆ ಮಗನನ್ನು ನದಿಗೆ ಎಸೆದಿದ್ದಾನೆ.

ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ಬಳಿಕ, ಏನೂ ನಡೆದಿಲ್ಲ ಎಂಬಂತೆ ಮನೆಗೆ ಮರಳಿದ್ದಾನೆ. ಮಾರ್ಚ್ 18ರಂದು ಕರಾಡ್ ಪೊಲೀಸರಿಗೆ ಕೃಷ್ಣಾ ನದಿಯ ದಡದಲ್ಲಿ ಗುರುತು ಪತ್ತೆಯಾಗದ ಮಗುವಿನ ಶವ ಸಿಕ್ಕಿತ್ತು. ಈ ನಡುವೆ, ಮಲ್ಲಿಕಾರ್ಜುನ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆಂದು ಪತ್ನಿಯನ್ನು ನಂಬಿಸಿದ್ದ.

ಆದರೆ ಏಪ್ರಿಲ್ 1ರಂದು ಮಗ ಸಿದ್ಧಾರ್ಥ್‌ನ ಹುಟ್ಟುಹಬ್ಬದಂದು ಪತಿ ನೀಡಿದ ಅಸಂಬದ್ಧ ಉತ್ತರಗಳಿಂದ ಅನುಮಾನಗೊಂಡ ಭಾಗ್ಯಶ್ರೀ, ಪೊಲೀಸರಿಗೆ ನಾಪತ್ತೆ ದೂರು ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ನಡೆಸಿದ ತಾಂತ್ರಿಕ ತನಿಖೆಯಲ್ಲಿ, ಮಲ್ಲಿಕಾರ್ಜುನನ ಮೊಬೈಲ್ ಲೊಕೇಶನ್ ಕರಾಡ್ ಭಾಗದಲ್ಲಿ ಇರುವುದಾಗಿ ಪತ್ತೆಯಾಯಿತು. ತೀವ್ರ ವಿಚಾರಣೆಯ ವೇಳೆ ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ವರದಿ : ಲಾವಣ್ಯ ಅನಿಗೋಳ

About The Author