ಭಕ್ತರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಸಾಕಾರಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆಯ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ಭವ್ಯ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿ, ಸ್ವಾಮೀಜಿಗಳ ಮೂರ್ತಿಗೆ ಪೂಜೆ ಸಲ್ಲಿಸಿದರು.
ದ್ರಾವಿಡ, ಚಾಲುಕ್ಯ, ಹೊಯ್ಸಳ ಹಾಗೂ ಗಂಗರ ಶೈಲಿಯ ವಿನ್ಯಾಸಗಳನ್ನು ಒಳಗೊಂಡಿರುವ ಈ ಮಂದಿರವು ಒಡಿಶಾದ ಸೂರ್ಯ ದೇವಾಲಯದ ನಿರ್ಮಾಣ ಶೈಲಿಯಿಂದ ಪ್ರೇರಿತವಾಗಿದೆ. ಸುಮಾರು ಹತ್ತು ವರ್ಷಗಳ ನಿರಂತರ ಪರಿಶ್ರಮದಿಂದ 80 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಈ ಮಂದಿರ ನಿರ್ಮಾಣಗೊಂಡಿದ್ದು, ಖ್ಯಾತ ವಾಸ್ತುಶಿಲ್ಪಿ ಶಂಕರ್ ಸ್ಥಪತಿ ಅವರ ಮೇಲ್ವಿಚಾರಣೆಯಲ್ಲಿ ಮೂಡಿಬಂದಿದೆ.
ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಶಕ್ತಿಯ ಸಂಕೇತ ಎಂದರು.
ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದ್ದಾರೆ. ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕಕ್ಕೆ ಬರುವುದು ಸದಾ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಇನ್ನಷ್ಟು ಸಂತೋಷ ತಂದಿದೆ ಎಂದು ಪ್ರಧಾನಿ ಹೇಳಿದರು.
ವರದಿ : ಲಾವಣ್ಯ ಅನಿಗೋಳ




