ಬೀದರ್ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಮತ್ತೊಮ್ಮೆ ಸ್ಥಗಿತಗೊಂಡಿದ್ದು, ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಈ ಮಾರ್ಗಕ್ಕೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಮೂರು ವರ್ಷದ ರಿಯಾಯಿತಿ ಅವಧಿ ಪೂರ್ಣಗೊಂಡ ನಂತರ ಕಾರ್ಯಾಚರಣೆಯ ವೆಚ್ಚ ಹೆಚ್ಚಾಗಿದ್ದು, ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟದ ನೆಪ ನೀಡಿ ಸೇವೆ ಸ್ಥಗಿತಗೊಳಿಸಲು ಮುಂದಾಗಿವೆ.
ಈ ಹಿಂದೆ ಕೂಡ ಸೇವೆ ಸ್ಥಗಿತಗೊಂಡಿದ್ದ ವೇಳೆ, KKRDB ವತಿಯಿಂದ ಸುಮಾರು 13 ಕೋಟಿ ರೂಪಾಯಿ ಅನುದಾನ ನೀಡಿ ವಿಮಾನಯಾನ ಸೇವೆಯನ್ನು ಮರುಾರಂಭಿಸಲಾಗಿತ್ತು.
ಕಳೆದ ವರ್ಷ ಏಪ್ರಿಲ್ 15ರಿಂದ Star Air ಬೀದರ್-ಬೆಂಗಳೂರು ಮಾರ್ಗದಲ್ಲಿ ಮರುಸೇವೆ ಆರಂಭಿಸಿತ್ತು. ಈ ಸೇವೆಯ ಒಪ್ಪಂದವು 2026ರ ಏಪ್ರಿಲ್ 14ರವರೆಗೆ ಮಾತ್ರ ಮಾನ್ಯವಾಗಿತ್ತು. ಇದೀಗ ಆ ಅವಧಿ ಮುಗಿದ ಹಿನ್ನೆಲೆ ಬುಧವಾರದಿಂದ ಮತ್ತೆ ವಿಮಾನಯಾನ ಸೇವೆ ಸ್ಥಗಿತಗೊಂಡಿದೆ.
Star Air ಸಂಸ್ಥೆ 2025ರಲ್ಲಿ ಬೀದರ್-ಬೆಂಗಳೂರು ಸೇವೆಯನ್ನು ಮರುಾರಂಭಿಸುವಾಗ, ವ್ಯವಹಾರಸ್ಥರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ರಕ್ಷಣಾ ಸಿಬ್ಬಂದಿಗೆ ಇದು ಅನುಕೂಲಕರವಾಗಲಿದೆ ಎಂದು ಹೇಳಿತ್ತು. ಈ ಮಾರ್ಗದಲ್ಲಿ ಪ್ರತಿದಿನ ಉತ್ತಮ ಪ್ರಮಾಣದ ಪ್ರಯಾಣಿಕರು ಸಂಚರಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು.
ಇದಕ್ಕೂ ಮೊದಲು ಕಲಬುರಗಿ ಮಾರ್ಗದ ವಿಮಾನ ಸೇವೆ ಸ್ಥಗಿತಗೊಂಡ ನಂತರ ಬೀದರ್-ಬೆಂಗಳೂರು ಮಾರ್ಗಕ್ಕೆ ಬೇಡಿಕೆ ಹೆಚ್ಚಾಗಿತ್ತು. ಇದೀಗ ಮತ್ತೆ ಸೇವೆ ನಿಲ್ಲಿಸಿರುವುದು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ವರದಿ : ಲಾವಣ್ಯ ಅನಿಗೋಳ




