ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣುಗಳು 500 ರೂ.ದಿಂದ 2000 ರೂ.ವರೆಗೆ ಮಾರಾಟವಾಗುತ್ತವೆ. ಆದರೆ ಈಗ ಇಂಡಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ. ಒಂದು ಕೆ.ಜಿ ಮಾವು 1 ಲಕ್ಷ ರೂ.ಗೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ. ಇಂಡಿ ತಾಲೂಕಿನ ಅನಂತ ಹಾಗೂ ರಾಜಶ್ರೀ ದಂಪತಿಗಳ ತೋಟದಲ್ಲಿ ಬೆಳೆದ ಜಪಾನ್ ಮೂಲದ ಮಿಯಾಝಕಿ ತಳಿಯ ಮಾವಿಗೆ ಈ ಅಪರೂಪದ ಬೆಲೆ ದೊರೆತಿದೆ.
ಕೆಲವು ವರ್ಷಗಳ ಹಿಂದೆ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಸುಮಾರು 10,000 ರೂ. ಬೆಲೆಗೆ ಒಂದರಂತೆ 25 ಮಿಯಾಝಕಿ ಸಸಿಗಳನ್ನು ಖರೀದಿಸಿ ತಮ್ಮ ತೋಟದಲ್ಲಿ ನೆಟ್ಟಿದ್ದರು. ಬಂಜರು ಭೂಮಿಯಲ್ಲಿ ಈ ತಳಿ ಬೆಳೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇದ್ದರೂ, ಇಂದು ಅದೇ ತೋಟ ಉತ್ತಮ ಫಲ ನೀಡುತ್ತಿದೆ. ಪ್ರತಿ ಗಿಡವು 25 ರಿಂದ 30 ಹಣ್ಣುಗಳವರೆಗೆ ನೀಡುತ್ತಿರುವುದು ವಿಶೇಷ.
ಈ ಮಾವಿನ ಬೆಲೆ ಮತ್ತು ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಕೋಲ್ಕತ್ತಾ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಿಂದ ವ್ಯಾಪಾರಿಗಳ ಕರೆಗಳು ಬರುತ್ತಿದ್ದು, ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಗಮನಾರ್ಹ ವಿಷಯವೆಂದರೆ, ಈ ಮಿಯಾಝಕಿ ಮಾವಿಗೆ ವಿದೇಶಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಕೆ.ಜಿಗೆ 2 ರಿಂದ 2.5 ಲಕ್ಷ ರೂ.ವರೆಗೆ ಮಾರಾಟವಾಗುತ್ತದೆ ಎನ್ನಲಾಗಿದೆ.
20 ವರ್ಷಗಳ ಹಿಂದೆ ಖರೀದಿಸಿದ್ದ ಬಂಜರು ಭೂಮಿಯನ್ನು ಶ್ರಮದಿಂದ ಹಸಿರು ತೋಟವನ್ನಾಗಿ ರೂಪಿಸಿದ ಅನಂತ-ರಾಜಶ್ರೀ ದಂಪತಿಗಳು ಈಗ ಈ ಅಪರೂಪದ ಸಾಧನೆಯಿಂದ ಆಶ್ಚರ್ಯಗೊಂಡಿದ್ದಾರೆ. ಜಿಲ್ಲೆಯ ಜನರೂ ಈ ಮಾವಿನ ಬೆಲೆ ಕೇಳಿ ಬೆರಗಾಗಿದ್ದಾರೆ.
ವರದಿ : ಲಾವಣ್ಯ ಅನಿಗೋಳ




