Tumakuru News: ಸೂರ್ಯನ ಉರಿ ಬಿಸಲಿಗೆ ಇಡೀ ಕರುನಾಡೇ ತತ್ತರಿಸಿದೆ. ಜನರಲ್ಲದೆ ಮೂಕ ಪ್ರಾಣಿಗಳು ನಲುಗಿ ಹೋಗಿವೆ. ಈ ನಡುವೆ ಸದ್ದಿಲ್ಲದೆ ಬರಪೀಡಿತ ಪ್ರದೇಶದಲ್ಲಿ ಜಾನುವಾರುಗಳಿಗೆ ಉಚಿತ ಮೇವು ವಿತರಿಸುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸುತಿದ್ದಾರೆ ಸನ್ಯಾಸಿಯೊಬ್ಬರು..
ತುಮಕೂರು ಜಿಲ್ಲೆಯ ಗಡಿಭಾಗ ಹಾಗೂ ಸದಾ ಬರಪೀಡಿತ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿರೋ ತಾಲೂಕು ಪಾವಗಡ. ಸೂರ್ಯನ ಉರಿಬಿಸಿಲ ನಡುವೆ ಕೂಲಿನಾಲಿ ಮಾಡಿ ಬದುಕಲು ಹೆಣಗಾಡುತ್ತಿರುವ ವೇಳೆ ತಮ್ಮನೇ ನಂಬಿಕೊಂಡಿರುವ ಎಮ್ಮೆ, ಹಸು ಸೇರಿದಂತೆ ಇತರೆ ಜಾನುವಾರುಗಳ ಪೋಷಣೆ ರೈತರಿಗೆ ದಿಕ್ಕೇ ತೋಚದಂತಾಗಿದೆ.
ಇದನ್ನ ಅರಿತ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದ ಮಹಾರಾಜ್ ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವು ವಿತರಣೆ ಮಾಡುತ್ತಿದೆ. ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಮೇವು ವಿತರಣಾ ಕೇಂದ್ರದ ಮೂಲಕ ಗಮನ ಸೆಳೆದಿದೆ. ಇದರ ರೂವಾರಿಗಳಾದ ಸ್ವಾಮೀ ಜಪಾನಂದ ಮಹಾರಾಜ್ ಗೋವುಗಳ ರಕ್ಷಣೆ ಮರೆತ ಸರ್ಕಾರದ ಬಗ್ಗೆ ತುಸು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.
2 ಮೇವು ಪಡೆಯಲು ಬರುವ ರೈತರು ಹಾಗೂ ಗೋಪಾಲಕರಿಗೆ ಕೇಂದ್ರದ ಬಳಿ ಮೇವು ವಿತರಣಾ ಕಾರ್ಡ್ ಗಳನ್ನು ವಿತರಿಸಲಾಗುತ್ತೆ. ಅದರಲ್ಲಿ ಎಷ್ಟು ಜಾನುವಾರುಗಳಿವೆ ಅನ್ನೋ ಆಧರಿಸಿ, ಸರದಿಯಂತೆ ತಮ್ಮ ಪಾಲಿನ ಮೇವನ್ನು ಪಡೆದುಕೊಳ್ಳುತ್ತಿದ್ದಾರೆ. ಮೇವು ವಿತರಣಾ ಕೇಂದ್ರದ ಬಳಿ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಈ ಬಾರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮೇವು ವಿತರಿಸಲಾಗುತ್ತಿದೆ.
ಇನ್ಫೋಸಿಸ್ ಫೌಂಡೇಷನ್ ಸುಧಾ ಮೂರ್ತಿ, ಮೂರ್ತಿ ಟ್ರಸ್ಟ್ ನ ಅಧ್ಯಕ್ಷರಾದ ಜಯಶ್ರೀ ದೇಶಪಾಂಡೆ, ಯು.ಎಸ್.ಎ. ಇವರ ಸಹಕಾರ ಇದಕ್ಕೆ ಇದೆ. ಸ್ವಯಂಸೇವಾ ಸಹಕಾರವನ್ನು ಸಮರ್ಪಣ ಇನ್ಫೋಸಿಸ್ ತಂಡದ ಸದಸ್ಯರು ಹಾಗೂ ಟೀಂ-ವಿವೇಕಾನಂದ ತಂಡದ ಸದಸ್ಯರು ತೊಡಗಿಸಿಕೊಂಡಿದ್ದಾರೆ. ವಾರ ಪೂರ್ತಿ ಕೆಲಸ ಮಾಡೋ ಟೆಕ್ಕಿಗಳು ವಾರದಲ್ಲಿ ಒಮ್ಮೆ ಪಾವಗಡಕ್ಕೆ ಬಂದು ರೈತರ ಸೇವೆಯಲ್ಲಿ ತೊಡಗಿಸಿಕೊಳ್ಳುತಿದ್ದಾರೆ. ಅವರು ಅವರಿಗೆ ಖುಷಿಯನ್ನ ಕೂಡ ಕೊಟ್ಟಿದೆ.
ಸುಮಾರು 8000ಕ್ಕೂ ಅಧಿಕ ಜಾನುವಾರುಗಳಿಗೆ ಇದರ ಪ್ರಯೋಜನ ವಾಗುತ್ತಿದೆ. ಇದರಿಂದ ಗೋವುಗಳನ್ನು ವೃಥಾ ಮಾರಾಟ ಮಾಡುವುದು ತಪ್ಪಿದಂತಾಗಿದೆ. ಚಳ್ಳಕೆರೆಯಿಂದ ಹೊಸಪೇಟೆಯವರೆಗೆ ವ್ಯಾಪಕವಾಗಿರುವ ಪರಂಪರಾನುಗತವಾಗಿ ಕಿಲಾರಿಗಳು, ನಾಯಕರುಗಳಿಂದ ನಿರ್ವಹಿಸಲ್ಪಡುವ ದೇವರಹಟ್ಟಿಗಳ ಎತ್ತು, ಹಸುಗಳಿಗೂ ಸಹ ಮೇವನ್ನು ಸರಬರಾಜು ಮಾಡಲಾಗುತ್ತಿದೆ. ದೂರ ಊರುಗಳಿಂದ ಬರುತ್ತಿರುವ ರೈತರು ಸ್ವಾಮೀಜಿ ಅವರ ಈ ಸೇವೆ ಕೈ ಮುಗಿದು ಈಸೇವೆ ನಿರಂತರವಾಗಿರಲಿ ಎಂದು ಹಾರೈಸುತಿದ್ದಾರೆ.
ಇದಲ್ಲದೆ ಗೋಪಾಲಕರ ಮನವಿಗೆ ಓಗೊಟ್ಟು ಅತ್ಯಂತ ನಿತ್ರಾಣವಾಗಿರುವ ಹಸುಗಳಿಗೆ, ಎತ್ತುಗಳಿಗೆ ಹಾಗೂ ಎಮ್ಮೆಗಳಿಗೆ ಉತ್ಕೃಷ್ಟ ಮಟ್ಟದ ಮೇವಿನ ಜೊತೆ ಬೂಸಾ ಹಾಗೂ ಇತರ ಪಶು ಆಹಾರಗಳನ್ನು ವಿತರಿಸುತ್ತಿರುವುದು ಗಮನಾರ್ಹವಾದ ವಿಚಾರ.
ಇದುವರೆಗೆ ಸರಿ ಸುಮಾರು 227 ಟನ್ ಜಾನುವಾರು ಮೇವು ಹಾಗೂ 110 ಟನ್ ಹಿಂಡಿ, ಬೂಸಾವನ್ನು ರೈತರು, ಗೋಪಾಲಕರಿಗೆ ವಿತರಿಸಲಾಗಿದೆ. ವಾರದಲ್ಲಿ ಬದಲಿ ದಿನಗಳಲ್ಲಿ ಉಚಿತ ಮೇವು ವಿತರಣೆ ಮಾಡಲಾಗುತ್ತಿದೆ. ಸರ್ಕಾರವೇ ಕೈಕಟ್ಟಿ ಕುಳಿತಿರುವಾಗ ಸ್ವಾಮೀಜಿಯೊಬ್ಬರ ಕಾರ್ಯ ಶ್ಲಾಘನೀಯ..




