ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ತೋಟದಲ್ಲಿರುವ ಬಾವಿಗೆ ಚಿರತೆ ಬಂದು ಬಿದ್ದಿದೆ. ನವಿಲನ್ನು ಬೆನ್ನಟ್ಟಿದ ಬರುತ್ತಿದ್ದ ವೇಳೆ ಚಿರತೆ ಸಮತೋಲನ ಕಳೆದುಕೊಂಡು ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ವಿಶೇಷವೆಂದರೆ, ಚಿರತೆಯ ಜೊತೆಯಲ್ಲೇ ನವಿಲೂ ಕೂಡ ಬಾವಿಗೆ ಬಿದ್ದಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಾವಿಯೊಳಗೆ ಏಣಿ ಇಳಿಸಿ, ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಬರಲು ಅವಕಾಶ ಮಾಡಿಕೊಟ್ಟರು. ಕೆಲವು ಸಮಯದ ಬಳಿಕ ಚಿರತೆ ಏಣಿಯ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಬಂದಿದೆ.
ಆದರೆ, ಮೇಲಕ್ಕೆ ಬಂದ ತಕ್ಷಣ ಚಿರತೆ ಬಲೆಗೆ ಸಿಲುಕದೆ ಕಾಡಿನತ್ತ ಪರಾರಿಯಾಗಿದೆ. ಇದರಿಂದ ಸಿಬ್ಬಂದಿಗೆ ಚಿರತೆಯನ್ನು ಬಂಧಿಸುವಲ್ಲಿ ಯಶಸ್ಸು ದೊರಕಲಿಲ್ಲ. ಚಿರತೆಯ ಬಾಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದಿದ್ದ ನವಿಲನ್ನು ಕೂಡ ಸಂರಕ್ಷಿಸಲಾಗಿದೆ.
ಒಟ್ಟಾರೆಯಾಗಿ ಚಿರತೆ ಮತ್ತು ನವಿಲು ಎರಡೂ ಸುರಕ್ಷಿತವಾಗಿ ಕಾಡು ಸೇರಿವೆ.
ಈ ಘಟನೆ ನಂತರ ಗ್ರಾಮಸ್ಥರಲ್ಲಿ ಭಯದ ಬೇರು ಆಳಕ್ಕೆ ತಲುಪಿದೆ. ಚಿರತೆಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ವಿಫಲವಾದರೂ, ಚಿರತೆಯ ಚಲನವಲನಗಳ ಮೇಲೆ ನಿಗಾ ಇಟ್ಟಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.




