ಬುಧವಾರ ಬೆಂಗಳೂರಿನಲ್ಲಿ ಸುರಿದ ಭಾರಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ, ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದ ರೈತನೊಬ್ಬನ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ನೆಲಸಮವಾಗಿದೆ.
ಕೃಷ್ಣಪ್ಪ ಅವರಿಗೆ ಸೇರಿದ ಈ ತೋಟದಲ್ಲಿ ಸುಮಾರು 3,000 ಬಾಳೆಗಿಡಗಳಿದ್ದವು ಎಂದು ಹೇಳಲಾಗಿದೆ. ತೋಟ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಫಸಲು ಬಿಡುವ ಹಂತದಲ್ಲಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸುಮಾರು ₹8 ರಿಂದ ₹10 ಲಕ್ಷ ವೆಚ್ಚದಲ್ಲಿ ಬೆಳೆ ಬೆಳೆದಿದ್ದ ಅವರು, ಈ ಬಾರಿ ₹40 ರಿಂದ ₹45 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಕೃಷ್ಣಪ್ಪ ಅವರು ಹೆಂಡತಿಯ ಮಾಂಗಲ್ಯ ಸರ ಹಾಗೂ ಚಿನ್ನಾಭರಣವನ್ನು ಅಡವಿಟ್ಟು ಈ ಬಾಳೆ ಬೆಳೆ ಬೆಳೆದಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿದೆ. ಆದರೆ ಬಿರುಗಾಳಿ ಮಳೆಯ ಆರ್ಭಟಕ್ಕೆ ಅವರ ಕನಸುಗಳೆಲ್ಲವೂ ವರುಣನ ಆರ್ಭಟಕ್ಕೆ ಕೊಚ್ಚಿಕೊಂಡು ಹೋಗಿವೆ. ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ರೈತ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಕೃಷ್ಣಪ್ಪ ಕುಟುಂಬ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಮಳೆಯಿಂದ ಉಂಟಾದ ಈ ನಷ್ಟವು ರೈತ ಸಮುದಾಯದಲ್ಲಿ ಆತಂಕವನ್ನು ಹೆಚ್ಚಿಸಿದ್ದು, ಸ್ಥಳೀಯ ಅಧಿಕಾರಿಗಳು ಹಾನಿ ಪರಿಶೀಲನೆ ಆರಂಭಿಸಿದ್ದಾರೆ.




