ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಸುರಿದ ಅಕಾಲಿಕ ಮಳೆಯಿಂದ ರೈತರಿಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಅರಕಲಗೂಡು ತಾಲೂಕಿನ ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಎಕರೆಗಟ್ಟಲೆ ಬಾಳೆ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಬಿರುಗಾಳಿ ಮತ್ತು ಮಳೆಯ ಪರಿಣಾಮ ಲೋಕೇಶ್, ಪರಮೇಶ್, ನಾಗರಾಜ್ ಸೇರಿದಂತೆ ಹಲವಾರು ರೈತರಿಗೆ ಸೇರಿದ ಸಾವಿರಾರು ಬಾಳೆ ಗಿಡಗಳು ನೆಲಕಚ್ಚಿವೆ. ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆ ಸಂಪೂರ್ಣ ಹಾನಿಗೊಳಗಾಗಿರುವುದು ರೈತರನ್ನು ಕಂಗಾಲು ಮಾಡಿದೆ. ಇನ್ನೂ ಒಂದು ತಿಂಗಳಲ್ಲಿ ಬಾಳೆಗೊನೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ರೈತರು ಸಿದ್ಧರಾಗಿದ್ದರು. ಆದರೆ ಗಾಳಿ–ಮಳೆಯಿಂದ ಗಿಡಗಳು ಮುರಿದು ಬಿದ್ದಿದ್ದು, ಬಾಳೆಗೊನೆಗಳೂ ಹಾನಿಗೊಳಗಾಗಿವೆ.
ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ರೈತರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ತಮ್ಮ ಜೀವನಾಧಾರವೇ ಕುಸಿದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಕೆಲ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಕೂಡ ನೆಲಕಚ್ಚಿದೆ. ಜೊತೆಗೆ ಎರಡು ವಾಸದ ಮನೆಗಳ ಹಂಚುಗಳು ಗಾಳಿಗೆ ಹಾರಿ ಹೋಗಿರುವುದು ವರದಿಯಾಗಿದೆ.
ನಷ್ಟಕ್ಕೊಳಗಾದ ರೈತರು ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕಾಲಿಕ ಮಳೆಯ ಹೊಡೆತದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ನೆರವು ಮತ್ತು ಪರಿಹಾರಕ್ಕಾಗಿ ಸರ್ಕಾರದ ತಕ್ಷಣದ ಹಸ್ತಕ್ಷೇಪ ಅಗತ್ಯವಾಗಿದೆ.




