ʼಟೀ–ಕಾಫಿʼ ಗೂ ಹೊಸ ರೇಟ್ ? ಒಂದೇ ಸಲ ಭಾರೀ ಬೆಲೆ ಏರಿಕೆ!

ಹುಬ್ಬಳ್ಳಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರವನ್ನು ದಿಢೀರ್ ಹೆಚ್ಚಿಸಿದ್ದು, ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಮೇ 1ರಿಂದ ಜಾರಿಗೆ ಬಂದ ಈ ಹೊಸ ದರ ಏರಿಕೆಯಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಹೋಟೆಲ್ ಉದ್ಯಮಕ್ಕೆ ಸಂಕಷ್ಟ ತಂದೊಡ್ಡಿದೆ.

ಕಳೆದ ಕೆಲವು ತಿಂಗಳಿಂದಲೇ ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಹೋಟೆಲ್ ಉದ್ಯಮ ಸಂಕಷ್ಟ ಎದುರಿಸುತ್ತಿತ್ತು. ಸಿಲಿಂಡರ್ ಕೊರತೆಯಿಂದ ಬ್ಲಾಕ್ ಮಾರ್ಕೆಟ್‌ನಲ್ಲಿ ₹4,000 ರಿಂದ ₹7,000 ವರೆಗೆ ಹಣ ನೀಡಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಹಲವು ಹೋಟೆಲ್‌ಗಳು ʼಮೆನುʼ ಕಡಿತಗೊಳಿಸಬೇಕಾಗಿ ಬಂದಿತ್ತು. ಇನ್ನು ಕೆಲವು ಹೊಟೇಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದವು.

ಇದೀಗ ಮತ್ತೆ ದರ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಊಟ, ತಿಂಡಿ, ಕಾಫಿ ಮತ್ತು ಟೀ ದರಗಳನ್ನು ಹೆಚ್ಚಿಸುವ ಒತ್ತಡಕ್ಕೆ ಸಿಲುಕಿವೆ. ಆದರೆ ಗ್ರಾಹಕರ ಮೇಲೆ, ವಿಶೇಷವಾಗಿ ಕೂಲಿ ಕಾರ್ಮಿಕರ ಮೇಲೆ ಹೆಚ್ಚುವರಿ ಹೊರೆ ಹಾಕಲು ಹೋಟೆಲ್ ಮಾಲೀಕರು ಹಿಂಜರಿಯುತ್ತಿದ್ದಾರೆ. ಈ ನಿರಂತರ ದರ ಏರಿಕೆ ಮತ್ತು ಸರಬರಾಜು ಸಮಸ್ಯೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ಹೋಟೆಲ್ ಉದ್ಯಮ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಒಟ್ಟಾರೆ ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಉದ್ಯಮದಲ್ಲಿ ಮತ್ತೊಂದು ಆರ್ಥಿಕ ಒತ್ತಡ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ದರದಲ್ಲಿ ಏರಿಕೆ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.

About The Author