ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ. ಪಾರಂಪರಿಕ, ಆಧುನಿಕ ಶೈಲಿಗಳ ಸಂಯೋಜನೆಯೊಂದಿಗೆ ನಿರ್ಮಾಣಗೊಂಡಿರುವ ದೇವಳದಲ್ಲಿ ಶಿಲಾ ಶಿಲ್ಪ, ದಾರುಶಿಲ್ಪಗಳ ಸಮನ್ವಯ ವಿಶೇಷವಾಗಿದ್ದು, ಸೌಂದರ್ಯವನ್ನು ಹೆಚ್ಚಿಸಿದೆ. ಗೋಪುರ, ಮಂಟಪಗಳು, ಕಂಬಗಳ ಅಲಂಕಾರ ಕಣ್ಮನಗಳಿಗೆ ಹಬ್ಬದ ಅನುಭವ ನೀಡುತ್ತಿದೆ.

ರಾಜಗೋಪುರವು ದ್ವಿತಲ ರಚನೆಯಾಗಿದ್ದು, ಒಳ- ಹೊರ ಭಾಗಗಳಲ್ಲಿ ಕಂಬಗಳ ಸುಂದರ ವಿನ್ಯಾಸವಿದೆ. ಮಂಟಪದ ಕಂಬಗಳಲ್ಲಿ ಹೊಯ್ಸಳ, ಚಾಲುಕ್ಯ ಶೈಲಿಯ ಶಿಲ್ಪಕಲೆ ಅಳವಡಿಸಲಾಗಿದ್ದು, ಪುರಾತನ ಶೈಲಿಯ ನಕ್ಷೆಯನ್ನು ಉಳಿಸಿಕೊಂಡು ನವೀನ ರೂಪ ನೀಡಲಾಗಿದೆ.

ಅಗ್ರಸಭೆ, ಸುತ್ತುಪೌಳಿಯ ಭಾಗಗಳಲ್ಲಿ ಹೊಯ್ಸಳ ಶೈಲಿಯ ಕಂಬಗಳು ಅಳವಡಿಸಲ್ಪಟ್ಟಿದ್ದು, ಪ್ರದಕ್ಷಿಣೆ ಮಾಡುವಾಗ ಈ ಶಿಲ್ಪಕಲೆ ವಿಶೇಷ ಅನುಭವ ನೀಡುತ್ತದೆ. ಗರ್ಭಗುಡಿ ದ್ವಿತಲ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಸಂಪ್ರದಾಯಬದ್ಧ ಶಿಲ್ಪಶಾಸ್ತ್ರದ ನಿಯಮಗಳನ್ನು ಪಾಲಿಸಲಾಗಿದೆ.
ತೀರ್ಥಮಂಟಪ, ಮುಖಮಂಟಪ, ವಸಂತಮಂಟಪ ಸೇರಿದಂತೆ ವಿವಿಧ ಭಾಗಗಳಲ್ಲಿ ವಿಭಿನ್ನ ಶೈಲಿಗಳ ಸಂಯೋಜನೆಯಿದೆ.

ಒಟ್ಟಾರೆ 64 ಕಂಬಗಳೊಂದಿಗೆ ದೇವಸ್ಥಾನವು ಶಿಲ್ಪಕಲೆಯ ಅದ್ಭುತ ಮಾದರಿಯಾಗಿದೆ. ದೇವಾಲಯದ ಸುತ್ತಮುತ್ತಲಿನ ಶಿಲ್ಪ, ಅಲಂಕಾರಗಳು ಭಕ್ತರಲ್ಲಿ ಭಕ್ತಿ ಹೆಚ್ಚಿಸಿ ದೇವರ ದರ್ಶನದಲ್ಲಿ ತಲ್ಲೀನತೆ ಉಂಟುಮಾಡುವಂತಿವೆ. ಈ ನವೀಕರಣ ಕಾರ್ಯವು ದೇವಾಲಯದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

About The Author