ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಮಚ್ಚಿನಿಂದ ಭೀಕರ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವವರು 68 ವರ್ಷದ ವೃದ್ದನನ್ನು ತಮ್ಮೇಗೌಡ ಎಂದು ಗುರುತಿಸಲಾಗಿದೆ. ಬೋರೇಗೌಡ ಅಲಿಯಾಸ್ ಲೋಕೇಶ್ (49) ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಸ್ಥಳೀಯರ ಪ್ರಕಾರ, ಆತ ಪುಡಿ ರೌಡಿ ಎಂದು ಪರಿಚಿತನಾಗಿದ್ದಾನೆ.
ತಮ್ಮೇಗೌಡ ಅವರು ತಮ್ಮ ಪತ್ನಿಯೊಂದಿಗೆ ತೋಟದಿಂದ ಎಳನೀರು ತೆಗೆದುಕೊಂಡು ಮನೆಗೆ ಬರುತ್ತಿದ್ದ ವೇಳೆ, ಮಧ್ಯದಲ್ಲಿ ಎದುರಾದ ಬೋರೇಗೌಡ ಏಕಾಏಕಿ ಮಚ್ಚು ಹಿಡಿದು ಹಲ್ಲೆ ನಡೆಸಿದ್ದಾನೆ. ನೆಲಕ್ಕೆ ಬಿದ್ದು ಬೇಡಿಕೊಂಡರೂ ದಾಳಿ ನಿಲ್ಲಿಸದೇ ನಿರ್ದಯವಾಗಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪತಿಯ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡ ತಮ್ಮೇಗೌಡರ ಪತ್ನಿ ಭಯದಿಂದ ಸ್ಥಳದಿಂದ ಓಡಿ ಹೋಗಿದ್ದಾರೆ. ದಾಳಿ ನಡೆಸಿದ ಬಳಿಕವೂ ಆರೋಪಿ ಅಟ್ಟಹಾಸ ತೋರಿಸಿ, ಅಲ್ಲಿ ಡ್ಯಾನ್ಸ್ ಮಾಡುತ್ತಾ ವಿಕೃತ ವರ್ತನೆ ಪ್ರದರ್ಶಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ವೃದ್ಧೆಯನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಮನೆ ಕಿಟಕಿಗಳನ್ನು ಒಡೆದು ಹಾಕಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆಯುತ್ತಿದ್ದರೂ ಸ್ಥಳದಲ್ಲಿದ್ದವರು ಭಯದಿಂದ ಮಧ್ಯಪ್ರವೇಶಿಸಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ. ಗಾಯಗೊಂಡ ತಮ್ಮೇಗೌಡರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ತಕ್ಷಣ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಲು ಮುಂದಿನ ಕ್ರಮ ಕೈಗೊಂಡಿದ್ದಾರೆ.




