ಪ್ರೇಮ ಸಂಬಂಧ, ನಂಬಿಕೆ ಮತ್ತು ವಂಚನೆ ಆರೋಪಗಳ ನಡುವೆ ಪೊಲೀಸ್ ಇಲಾಖೆಯೊಳಗಿನ ಒಂದು ಸಂಬಂಧ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಎಸ್‌ಐ ಒಬ್ಬರು ಲೇಡಿ ಕಾನ್‌ಸ್ಟೇಬಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ವಿಷಯ ಇದೀಗ ಸಾರ್ವಜನಿಕ ಚರ್ಚೆಗೆ ಬಂದಿದೆ.
ಯಾದಗಿರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್‌ಐ ವೀರೇಶ್ ಆಲೂರು ಮತ್ತು ರಾಯಚೂರು ಗ್ರಾಮೀಣ ಠಾಣೆಯ ಕಾನ್‌ಸ್ಟೇಬಲ್ ಜಯಶ್ರೀ ಯರಗಲ್ ನಡುವೆ ಸುಮಾರು 8 ವರ್ಷಗಳ ಪ್ರೇಮ ಸಂಬಂಧ ಇದ್ದುದಾಗಿ ತಿಳಿದುಬಂದಿದೆ. ಕೋಚಿಂಗ್ ಸೆಂಟರ್‌ನಲ್ಲಿ ಆರಂಭವಾದ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದ್ದು, ಬಳಿಕ ಇಬ್ಬರೂ ಗಂಡ-ಹೆಂಡತಿಯಂತೆ ಒಂದೇ ರೂಮಿನಲ್ಲಿ ಜೀವನ ನಡೆಸಿದ್ದರೆಂಬ ಆರೋಪವೂ ಇದೆ. ಪಿಎಸ್‌ಐ ವೀರೇಶ್ ಅವರ ಪ್ರಕಾರ, ಈ ಅವಧಿಯಲ್ಲಿ ಹಲವು ಬಾರಿ ದೈಹಿಕ ಸಂಬಂಧ ನಡೆದಿದ್ದು, ಹಣಕಾಸಿನ ಸಹಾಯವೂ ನೀಡಲಾಗಿದೆ ಎಂದು ಹೇಳಿದ್ದಾರೆ. ಸುಮಾರು 35 ಲಕ್ಷ ರೂಪಾಯಿ ನೀಡಿದ್ದು, ಮನೆ ನಿರ್ಮಾಣ ಹಾಗೂ ಕುಟುಂಬ ಸಹಾಯಕ್ಕೂ ಬಳಸಲಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಇದೇ ವೇಳೆ ಆರೋಗ್ಯದ ಕಾರಣ ಹೇಳಿ ಮೂರು ಬಾರಿ ಗರ್ಭಪಾತ (ಅಬಾರ್ಷನ್) ಮಾಡಿಸಿಕೊಂಡಿದ್ದಾಳೆ ಎಂಬ ಗಂಭೀರ ಆರೋಪವನ್ನೂ ಪಿಎಸ್‌ಐ ಮಾಡಿದ್ದಾರೆ. ಇದೀಗ ಮದುವೆ ವಿಷಯ ಬಂದಾಗ ಸಂಬಂಧದಿಂದ ಹಿಂದೆ ಸರಿದು, ಮತ್ತೊಬ್ಬರೊಂದಿಗೆ ಮದುವೆಯಾಗಲು ಮುಂದಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಜಯಶ್ರೀ ಮೇ 7ರಂದು ರಾಯಚೂರಿನಲ್ಲಿ ಮತ್ತೊಬ್ಬ ಯುವಕನೊಂದಿಗೆ ವಿವಾಹವಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಸಂಬಂಧ ಹಿಂದೆ ರಾಜಕೀಯ ಹಾಗೂ ಪೊಲೀಸ್ ಮಟ್ಟದಲ್ಲಿಯೂ ಸಂಧಾನ ಯತ್ನಗಳು ನಡೆದಿದ್ದರೂ ಫಲಕಾರಿಯಾಗಿಲ್ಲ ಎಂದು ತಿಳಿದುಬಂದಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಸಮ್ಮುಖದಲ್ಲೂ ಮಾತುಕತೆ ನಡೆದಿದ್ದರೂ ಒಪ್ಪಂದ ಆಗಿಲ್ಲ ಎಂಬುದು ಪಿಎಸ್‌ಐ ಆರೋಪ.
ಇದೀಗ ಪಿಎಸ್‌ಐ ವೀರೇಶ್, ನನಗೆ ನ್ಯಾಯ ಬೇಕು ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ತಮ್ಮ ಹಣ, ಸಮಯ ಮತ್ತು ಜೀವನ ಹಾಳಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಈ ಪ್ರಕರಣ ಈಗ ಪೊಲೀಸ್ ಇಲಾಖೆ ಒಳಗಿನ ಸಂಬಂಧ, ನಂಬಿಕೆ ಮತ್ತು ವೈಯಕ್ತಿಕ ಜೀವನದ ನಡುವಿನ ಗಂಭೀರ ಚರ್ಚೆಗೆ ಕಾರಣವಾಗಿದೆ.




