ಬೆಂಗಳೂರಿನಲ್ಲಿ ಮೇ 8ರಿಂದ 17ರವರೆಗೆ ಮಾವು ಹಾಗೂ ಹಲಸು ಮೇಳ ನಡೆಯಲಿದೆ. ಕರ್ನಾಟಕ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಈ ಮೇಳವನ್ನು ಕಬ್ಬನ್ ಪಾರ್ಕ್ ಬ್ಯಾಂಡ್ ಸ್ಟ್ಯಾಂಡ್ ಬಳಿ ಆಯೋಜಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ನಗರದೆಲ್ಲೆಡೆ 8 ವಿಭಿನ್ನ ಸ್ಥಳಗಳಲ್ಲಿ ಮೇಳದಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಜೊತೆಗೆ ಉತ್ತರ ಬೆಂಗಳೂರಿನ ಸಹಕಾರ ನಗರ ಗಣೇಶ ಗ್ರೌಂಡ್ಸ್, ಪೂರ್ವ ಬೆಂಗಳೂರಿನ ವೈಟ್ಫೀಲ್ಡ್ ಗ್ರೌಂಡ್, ದಕ್ಷಿಣ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ, ಪಶ್ಚಿಮ ಬೆಂಗಳೂರಿನ ಜಿಬಿಎ ಮೈದಾನ ಹಾಗೂ ಕೆಲವು ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಮಾವು ಮೇಳ ಆಯೋಜಿಸಲಾಗುತ್ತಿದೆ.
ಈ ಬಾರಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಮಾವು ತಳಿಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರಲಿವೆ. ಒಟ್ಟು 50 ಮಾವು ಮಳಿಗೆಗಳು ಮತ್ತು 7 ಹಲಸು ಮಳಿಗೆಗಳು ಮೇಳದಲ್ಲಿ ಭಾಗವಹಿಸಲಿವೆ. ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳಿಲ್ಲದೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ. ಮಾವು ನಿಗಮದ ಅಧ್ಯಕ್ಷ ಮುದ್ದುಗೌಡ ಅವರ ಪ್ರಕಾರ, ಈ ವರ್ಷ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಮಾವು ಉತ್ಪಾದನೆ ದಾಖಲಾಗಿದೆ. ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದು, ಉತ್ತಮ ಇಳುವರಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಲಿದ್ದಾರೆ. ಗ್ರಾಹಕರಿಗೆ 40 ರಿಂದ 50 ವಿವಿಧ ತಳಿಯ ಮಾವು ಹಾಗೂ 10 ರಿಂದ 12 ತಳಿಯ ಹಲಸುಗಳನ್ನು ಖರೀದಿಸುವ ಅವಕಾಶ ಲಭ್ಯವಿರಲಿದೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಜಿಐ ಟ್ಯಾಗ್ ಪಡೆದ ಕರಿ ಇಶಾಡ್ ಮಾವು ಕೂಡ ಈ ಮೇಳದ ಪ್ರಮುಖ ಆಕರ್ಷಣೆಯಾಗಲಿದೆ. ಜೊತೆಗೆ ರಸಪುರಿ, ಮಲ್ಲಿಕಾ, ಸಿಂಧೂರ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವುಗಳು ಲಭ್ಯವಾಗಲಿವೆ. ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




