ಯಲ್ಲಾಪುರದಲ್ಲಿ ಬೀದಿ ದೀಪಗಳ ಅವ್ಯವಸ್ಥೆ, ಕೆಟ್ಟು ನಿಂತ ಅಲಂಕಾರಿಕ ದೀಪಗಳು, ಮುರಿದು ಬಿದ್ದ ಕಂಬಗಳಿಂದ ಸಾರ್ವಜನಿಕರಿಗೆ ತೊಂದರೆ ಅರ್ಧದಲ್ಲೇ ನಿಂತ ಕಾಮಗಾರಿಗೆ ಅನುದಾನ ದುರುಪಯೋಗ ಆರೋಪ ಕೇಳಿಬರುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಪ್ರಮುಖ ರಸ್ತೆ ಹಾಗೂ ಒಳಬೀದಿಗಳಲ್ಲಿ ಅಳವಡಿಸಲಾಗಿದ್ದ ಅಲಂಕಾರಿಕ ದೀಪಗಳು ಬಹುತೇಕ ಕಾರ್ಯನಿರ್ವಹಿಸದೇ ನಿಂತಿದ್ದು, ರಾತ್ರಿ ವೇಳೆಯಲ್ಲಿ ಜನರು ಕತ್ತಲೆಯಲ್ಲೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಬೀದಿ ದೀಪಗಳ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಕೆಲವು ಕಂಬಗಳು ಅಪಾಯಕಾರಿಯಾಗಿ ವಾಲಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ, ಈ ನಿರ್ಲಕ್ಷ್ಯ ಭವಿಷ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬ ಭಯ ಸಾರ್ವಜನಿಕರಲ್ಲಿ ಮೂಡಿದೆ.
ಪಟ್ಟಣ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಯ ನಡುವಿನ ಸಮನ್ವಯದ ಕೊರತೆಯಿಂದ ಸಮಸ್ಯೆ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧದಲ್ಲೇ ಬಿಟ್ಟಿರುವುದರಿಂದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲಂಕಾರಿಕ ದೀಪಗಳ ಅಳವಡಿಕೆ ಹಾಗೂ ಸಂಬಂಧಿತ ಕಾಮಗಾರಿಯಲ್ಲಿ ಅನುದಾನ ದುರುಪಯೋಗವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತಕ್ಷಣವೇ ಕೆಟ್ಟು ನಿಂತ ಬೀದಿ ದೀಪಗಳನ್ನು ಸರಿಪಡಿಸಿ, ಮುರಿದು ಬಿದ್ದ ಕಂಬಗಳನ್ನು ಬದಲಾಯಿಸುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿ ಸುರಕ್ಷಿತ ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಮುಖ್ಯ ಬೇಡಿಕೆಯಾಗಿದೆ.




