ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮ ಇಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಸಾಮಾನ್ಯ ರೈತನ ಪುತ್ರ ಬಸವರಾಜ್ ಕೆಂಪವಾಡ ಅವರು ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವೀಸ್ (IFS-2025) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಕೇವಲ ಒಂದು ಎಕರೆ ಜಮೀನನ್ನೇ ನಂಬಿಕೊಂಡು ಜೀವನ ಸಾಗಿಸುವ ಬಡ ರೈತನ ಮಗ ಇಂದು ದೇಶಕ್ಕೆ ಟಾಪರ್ ಆಗಿರುವುದು ಗ್ರಾಮಸ್ಥರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಬಸವರಾಜ್ ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಈ ಸಾಧನೆ ಮಾಡಿದ್ದಾರೆ.
ಮಗನ ಸಾಧನೆ ಕುರಿತು ಮಾತನಾಡಿದ ತಂದೆ-ತಾಯಿ ಭಾವುಕರಾದರು. “ಬಸವರಾಜ್ ಚಿಕ್ಕಂದಿನಿಂದಲೇ ಓದಿನ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿದ್ದ. ನಮ್ಮಿಂದ ಹೆಚ್ಚಿನ ಸೌಲಭ್ಯ ಕೊಡಲು ಸಾಧ್ಯವಾಗಲಿಲ್ಲ. ಆದರೂ ಆತ ಕಷ್ಟಪಟ್ಟು ಓದಿ ಇಂದು ದೇಶದ ಮಟ್ಟದಲ್ಲಿ ಹೆಸರು ತಂದಿದ್ದಾನೆ. ರೈತನ ಮಗನೂ ದೊಡ್ಡ ಸಾಧನೆ ಮಾಡಬಹುದು ಎಂಬುದನ್ನು ನಮ್ಮ ಮಗ ಸಾಬೀತುಪಡಿಸಿದ್ದಾನೆ” ಎಂದು ಹೆಮ್ಮೆಯಿಂದ ಹೇಳಿದರು.
ತಾಯಿ ಕಣ್ಣೀರಿಡುತ್ತಾ, ರಾತ್ರಿ-ಹಗಲು ಎನ್ನದೆ ಓದುತ್ತಿದ್ದ. ಮನೆಯ ಪರಿಸ್ಥಿತಿ ಕಷ್ಟವಾಗಿದ್ದರೂ ಎಂದಿಗೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ʼನಾನು ಸಾಧನೆ ಮಾಡುತ್ತೇನೆ’ ಎಂದು ಹೇಳುತ್ತಿದ್ದ. ಇಂದು ಅವನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಭಾವುಕರಾದರು.
ಬಸವರಾಜ್ ಸಾಧನೆ ಹಿನ್ನೆಲೆಯಲ್ಲಿ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಯುವಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ʼನಮ್ಮ ಗ್ರಾಮದ ಹೆಸರು ದೇಶ ಮಟ್ಟದಲ್ಲಿ ಕೇಳಿಸುವಂತೆ ಮಾಡಿದ ಬಸವರಾಜ್ ನಮ್ಮೆಲ್ಲರಿಗೂ ಹೆಮ್ಮೆ. ಇಂತಹ ಸಾಧಕರು ಗ್ರಾಮೀಣ ಭಾಗದ ಯುವಕರಿಗೆ ಪ್ರೇರಣೆಯಾಗಬೇಕುʼ ಎಂದು ಗ್ರಾಮ ಹಿರಿಯರು ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ, ಯಾವುದೇ ವಿಶೇಷ ಕೋಚಿಂಗ್‌ಗಳಿಲ್ಲದೆ ಸತತ ಪರಿಶ್ರಮದಿಂದ ಅಖಿಲ ಭಾರತ ಪ್ರಥಮ ರ‍್ಯಾಂಕ್ ಗಳಿಸಿರುವ ಬಸವರಾಜ್ ಕೆಂಪವಾಡ ಇದೀಗ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ.




