ಕೊಪ್ಪಳ ತಾಲೂಕಿನ ಶಕ್ತಿಪೀಠವೆಂದೇ ಪ್ರಸಿದ್ಧಿ ಪಡೆದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಮಹಾ ರಥೋತ್ಸವ ಭಕ್ತಿಯಿಂದ ಹಾಗೂ ಅದ್ದೂರಿ ಸಂಭ್ರಮದ ನಡುವೆ ಜರುಗಿತು. ಗೋಧೂಳಿ ಸಮಯದಲ್ಲಿ ನಡೆದ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಹುಲಿಗೆಮ್ಮ ದೇವಿಯ ರಥೋತ್ಸವ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇವಿಗೆ ಕಂಕಣ ಧಾರಣೆ, ಲಘು ರಥೋತ್ಸವ, ಪ್ರಸಾದ ಕೇಳುವ ಸಂಪ್ರದಾಯ, ಬಾಳಿದಂಡಿ ಆರೋಹಣ ಹಾಗೂ ಗಂಗಾದೇವಿ ಪೂಜೆ ಸೇರಿದಂತೆ ಹಲವು ಆಚರಣೆಗಳು ಭಕ್ತಿಭಾವದಿಂದ ನಡೆದವು.
ʼಉದೋ… ಉದೋ…ʼ ಎಂಬ ಘೋಷಣೆಗಳ ನಡುವೆ ಸಾವಿರಾರು ಭಕ್ತರು ದೇವಿಯ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ದೇವಸ್ಥಾನ ಸುತ್ತಮುತ್ತ ಭಕ್ತಸಾಗರವೇ ನೆರೆದಿತ್ತು. ರಥೋತ್ಸವವು ಅತ್ಯಂತ ವೈಭವದಿಂದ ಸಾಗಿತು. ರಥೋತ್ಸವದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಕಲ್ಪಿಸಿತ್ತು. ಒಟ್ಟಾರೆ, ಹುಲಿಗಿಯ ಹುಲಿಗೆಮ್ಮ ದೇವಿಯ ಮಹಾರಥೋತ್ಸವವು ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿ ಗಮನ ಸೆಳೆಯಿತು.




