ಒಂದೆಡೆ ಮಳೆ & ಬಿರುಗಾಳಿ ಅಬ್ಬರ, ಇನ್ನೊಂದೆಡೆ 45 ಡಿಗ್ರಿ ಬಿಸಿಲು!

ಉತ್ತರ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮತ್ತೆ ರಾಜ್ಯದಲ್ಲಿ ಬಿಸಿಲು & ಮಳೆಯ ಮಿಶ್ರ ವಾತಾವರಣ ಮುಂದುವರೆಯುತ್ತಿದೆ. ಕರಾವಳಿ ಭಾಗದಲ್ಲಿ ಉಷ್ಣ ಅಲೆ ಆತಂಕ ಹೆಚ್ಚಾಗಿದ್ದು, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ಮೂರುರಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ಸಿಡಿಲು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ. ಕೆಲವೆಡೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದ್ದು, ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಭಾಗಗಳಲ್ಲಿ ಗಾಳಿಯ ವೇಗ 40 ರಿಂದ 50 ಕಿ.ಮೀ ಇರಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗದಲ್ಲಿ ಮತ್ತೆ ಹೀಟ್‌ವೇವ್ ಆತಂಕ ಎದುರಾಗಿದ್ದು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 64.5 ಮಿ.ಮೀ ರಿಂದ 115.5 ಮಿ.ಮೀ ವರೆಗೆ ಮಳೆಯಾಗುವ ನಿರೀಕ್ಷೆ ಇರುವುದರಿಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಉಷ್ಣಾಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ ವೇಳೆಯಲ್ಲಿ ಅನಗತ್ಯವಾಗಿ ಹೊರಗೆ ಹೋಗಬಾರದು, ಹೆಚ್ಚು ನೀರು ಕುಡಿಯಬೇಕು ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಎಳನೀರು, ಮಜ್ಜಿಗೆ ಹಾಗೂ ಹಣ್ಣಿನ ರಸ ಸೇವನೆ ಹೆಚ್ಚಿಸಿಕೊಳ್ಳುವಂತೆ ಸೂಚಿಸಲಾಗಿದೆ.

About The Author