ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳವಾದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ದರಗಳು ಭಾರೀ ಏರಿಕೆ ಕಂಡಿವೆ. ಎಂಸಿಎಕ್ಸ್ (MCX – Multi Commodity Exchange) ನಲ್ಲಿ ಫ್ಯೂಚರ್ ಚಿನ್ನ ಮತ್ತು ಬೆಳ್ಳಿ ವ್ಯವಹಾರದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ₹8,838ರಷ್ಟು ಏರಿಕೆಯಾಗಿ ₹1,61,887ಕ್ಕೆ ತಲುಪಿತ್ತು. ಇದೇ ವೇಳೆ 1 ಕೆಜಿ ಬೆಳ್ಳಿಯ ದರ ₹18,920 ಏರಿಕೆ ಕಂಡು ₹2,98,400ರಲ್ಲಿ ವಹಿವಾಟು ನಡೆಸುತ್ತಿತ್ತು. ಮಧ್ಯಾಹ್ನದ ವೇಳೆಗೆ ದರದಲ್ಲಿ ಇನ್ನಷ್ಟು ಏರಿಳಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯ ತಿಳಿಸಿದೆ.
ಎಂಸಿಎಕ್ಸ್ನಲ್ಲಿ ನಡೆಯುವ ಚಿನ್ನದ ವ್ಯವಹಾರವು ಭೌತಿಕ ಚಿನ್ನ ಖರೀದಿಗೆ ಸಂಬಂಧಪಟ್ಟದ್ದಲ್ಲ. ಇಲ್ಲಿ ‘ಫ್ಯೂಚರ್ಸ್ ಕಾಂಟ್ರಾಕ್ಟ್’ಗಳ ಮೂಲಕ ಭವಿಷ್ಯದ ದಿನಾಂಕಕ್ಕೆ ನಿಗದಿತ ದರದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ-ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಹೂಡಿಕೆದಾರರು ದರದ ಏರಿಳಿತದಿಂದ ಲಾಭ ಪಡೆಯಲು ಅಥವಾ ಹೂಡಿಕೆಯನ್ನು ಸುರಕ್ಷಿತಗೊಳಿಸಲು ಹೆಡ್ಜಿಂಗ್ ವ್ಯವಸ್ಥೆಯನ್ನು ಬಳಸುತ್ತಾರೆ. ಜಾಗತಿಕ ಆರ್ಥಿಕ ಪರಿಸ್ಥಿತಿ, ರಾಜಕೀಯ ಬೆಳವಣಿಗೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯ ಚಿನ್ನದ ಬೆಲೆ ಹಾಗೂ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಬದಲಾವಣೆಗಳು ಎಂಸಿಎಕ್ಸ್ ದರಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳು ತಕ್ಷಣವೇ ಸ್ಥಳೀಯ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಮೇಲೂ ಪರಿಣಾಮ ಉಂಟುಮಾಡುತ್ತವೆ.
ಎಂಸಿಎಕ್ಸ್ನಲ್ಲಿ ಚಿನ್ನದ ಫ್ಯೂಚರ್ಸ್ ದರ ಏರಿದರೆ ಸ್ಥಳೀಯ ಜ್ಯುವೆಲ್ಲರಿ ವ್ಯಾಪಾರಿಗಳು ಮತ್ತು ಬುಲ್ಲಿಯನ್ ಅಸೋಸಿಯೇಷನ್ಗಳು (IBJA) ಸಹ ಚಿನ್ನದ ದರ ಹೆಚ್ಚಿಸುತ್ತಾರೆ. ಅದೇ ರೀತಿ ದರ ಇಳಿಕೆಯಾದರೆ ಅಂಗಡಿಗಳಲ್ಲಿನ ಚಿನ್ನದ ಬೆಲೆಯೂ ಕಡಿಮೆಯಾಗುತ್ತದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಭಾರತದಲ್ಲಿನ ಅತಿದೊಡ್ಡ ಕಮಾಡಿಟಿ ಡೆರಿವೇಟಿವ್ಸ್ ವಹಿವಾಟು ಕೇಂದ್ರವಾಗಿದೆ. ಚಿನ್ನ, ಬೆಳ್ಳಿ, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಕೃಷಿ ಉತ್ಪನ್ನಗಳ ಡಿಜಿಟಲ್ ವಹಿವಾಟಿಗೆ ಇದು ವೇದಿಕೆ ಒದಗಿಸುತ್ತದೆ. ಷೇರು ಮಾರುಕಟ್ಟೆಯಂತೆಯೇ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯಲ್ಲಿ ಷೇರುಗಳ ಬದಲಿಗೆ ಸರಕುಗಳ ಮೇಲೆ ವ್ಯವಹಾರ ನಡೆಯುತ್ತದೆ. ಭವಿಷ್ಯದ ದಿನಾಂಕದಲ್ಲಿ ಸರಕುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಹೂಡಿಕೆದಾರರು ಇಲ್ಲಿ ಫ್ಯೂಚರ್ಸ್ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಸಂಪೂರ್ಣ ವ್ಯವಸ್ಥೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.




