ಕೊಪ್ಪಳದಲ್ಲಿ ‘ನೀಟ್’ ಅಕ್ರಮದ ವಿರುದ್ಧ ಸಿಡಿದೆದ್ದ ಯುವಶಕ್ತಿ!

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಕೊಪ್ಪಳದ ಬಸ್ ನಿಲ್ದಾಣದ ಕನಕದಾಸ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯನ್ನು ರದ್ದುಗೊಳಿಸಬೇಕು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ರಾಜ್ಯ ಮುಖಂಡ ತುಳಜರಾಮ್ ಎನ್. ಕೆ ಮಾತನಾಡಿ, ಪದೇ ಪದೇ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಹೊಡೆತ ನೀಡುತ್ತಿವೆ ಎಂದು ಆರೋಪಿಸಿದರು. ʼಪ್ರಾಮಾಣಿಕ ವಿದ್ಯಾರ್ಥಿಗಳ ಕನಸುಗಳು ಹಣ ಮತ್ತು ಅಕ್ರಮ ವ್ಯವಸ್ಥೆಯ ಮುಂದೆ ನಾಶವಾಗುತ್ತಿವೆ. ಪರೀಕ್ಷಾ ವ್ಯವಸ್ಥೆ ಕೋಚಿಂಗ್ ಮಾಫಿಯಾದ ಪ್ರಭಾವಕ್ಕೆ ಒಳಗಾಗಿದೆʼ ಎಂದು ಹೇಳಿದರು.

ಈ ಅಕ್ರಮಗಳ ಕುರಿತು ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿ, ಸಾಮಾನ್ಯ ವಿದ್ಯಾರ್ಥಿಗೂ ನ್ಯಾಯಸಮ್ಮತ ಅವಕಾಶ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಘಟನಾಕಾರರಾದ ಪ್ರದೀಪ್, ಶಾರದ, ಪೋಷಕರಾದ ಸಿದ್ದಲಿಂಗರೆಡ್ಡಿ, ಶರಣು ಗಡ್ಡಿ ಹಾಗೂ ವಿದ್ಯಾರ್ಥಿಗಳಾದ ಅಭಿಷೇಕ್, ಪಲ್ಲವಿ, ಪ್ರತಿಭಾ, ಸ್ಫೂರ್ತಿ, ಸ್ನೇಹ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author