6 ರಾಜ್ಯಗಳಿಗೆ ಡೈರೆಕ್ಟ್ ಕನೆಕ್ಷನ್! 16 ಬೋಗಿಗಳ ಸೂಪರ್ ಟ್ರೈನ್!

ಹುಬ್ಬಳ್ಳಿ–ಯೋಗ ನಗರಿ ಋಷಿಕೇಶ ನಡುವಿನ ರೈಲು ಪ್ರಯಾಣಿಕರಿಗೆ ರೈಲ್ವೆ ಮಂಡಳಿ ಮಹತ್ವದ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ಇದೀಗ ಖಾಯಂ (ನಿಯಮಿತ) ರೈಲು ಸೇವೆಯಾಗಿ ಪರಿವರ್ತಿಸಲಾಗಿದೆ. ಇದರಿಂದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಉತ್ತರಾಖಂಡ ರಾಜ್ಯಗಳ ನಡುವೆ ಸಂಚಾರ ಮತ್ತಷ್ಟು ಸುಗಮವಾಗಲಿದೆ.

ಈವರೆಗೆ ವಿಶೇಷ ರೈಲು ಸಂಖ್ಯೆ 07363 ಹಾಗೂ 07364 ಅಡಿಯಲ್ಲಿ ಸಂಚರಿಸುತ್ತಿದ್ದ ಈ ಸೇವೆಗಳು, 2026ರ ಜುಲೈ 6 ಮತ್ತು 9ರಿಂದ ಕ್ರಮವಾಗಿ 17363 ಮತ್ತು 17364 ಸಂಖ್ಯೆಗಳೊಂದಿಗೆ ನಿಯಮಿತ ಸೇವೆಯಾಗಿ ಆರಂಭವಾಗಲಿದೆ. ಹುಬ್ಬಳ್ಳಿಯಿಂದ ಪ್ರತಿ ಸೋಮವಾರ ಸಂಜೆ 7:45ಕ್ಕೆ ಹೊರಡುವ ರೈಲು ಬುಧವಾರ ಬೆಳಗ್ಗೆ 11:30ಕ್ಕೆ ಋಷಿಕೇಶ ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ ಗುರುವಾರ ಸಂಜೆ 6:15ಕ್ಕೆ ಹೊರಟು ಶನಿವಾರ ಬೆಳಗ್ಗೆ 6:30ಕ್ಕೆ ಹುಬ್ಬಳ್ಳಿಗೆ ಮರಳಲಿದೆ.

ಈ ಮಾರ್ಗವು ಧಾರವಾಡ, ಬೆಳಗಾವಿ, ಪುಣೆ, ಭುಸಾವಲ್, ಇಟಾರ್ಸಿ, ಝಾನ್ಸಿ, ಆಗ್ರಾ, ಹಜರತ್ ನಿಜಾಮುದ್ದೀನ್, ಗಾಜಿಯಾಬಾದ್, ಮುಜಾಫರ್‌ನಗರ ಮತ್ತು ಹರಿದ್ವಾರ ಸೇರಿದಂತೆ ಹಲವು ಪ್ರಮುಖ ನಗರಗಳ ಮೂಲಕ ಸಾಗಲಿದೆ. ಉತ್ತರ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಈ ದೀರ್ಘ ಮಾರ್ಗವು ಪ್ರಯಾಣಿಕರಿಗೆ ಸಮಯ ಮತ್ತು ಸಂಪರ್ಕದ ದೃಷ್ಟಿಯಿಂದ ಹೆಚ್ಚಿನ ಅನುಕೂಲ ನೀಡಲಿದೆ.

ಒಟ್ಟು 16 ಬೋಗಿಗಳಿರುವ ಈ ರೈಲಿನಲ್ಲಿ ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್, ಸಾಮಾನ್ಯ ದರ್ಜೆ ಹಾಗೂ ದಿವ್ಯಾಂಗ ಸ್ನೇಹಿ ಬೋಗಿಗಳು ಒಳಗೊಂಡಿವೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಖಾಯಂ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವೇಳಾಪಟ್ಟಿ ಮತ್ತು ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬಹುದು.

About The Author