ಲಾರಿಗೆ ಕಾರು ಡಿಕ್ಕಿ! ಸ್ಥಳದಲ್ಲೇ ಇಬ್ಬರು ದುರ್ಮರಣ

ಹುಬ್ಬಳ್ಳಿಯಲ್ಲಿ ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯ ಶಿರಗುಪ್ಪಿಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಗದಗ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಲಾರಿ ರಸ್ತೆ ಬದಿಯಲ್ಲಿ ಹಿಟಾಚಿ ಯಂತ್ರದೊಂದಿಗೆ ನಿಂತಿತ್ತು. ಇದೇ ವೇಳೆ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಯಿಂದ ಕಾರಿನಲ್ಲಿ ಎಡಭಾಗದಲ್ಲಿ ಕುಳಿತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಹಾಗೂ ಇನ್ನಿಬ್ಬರು ಪ್ರಯಾಣಿಕರು ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

About The Author