ತಹಶೀಲ್ದಾರ್ ಕಚೇರಿಯಲ್ಲಿ ಭೂಮಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿರಸ್ತೇದಾರ್ ಸುರೇಶ್ ಅರಕೇರಿ ಅವರು ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ದುಂಡಸಿ ಗ್ರಾಮದ ಹಜರತ್ಅಲಿ ತಂದೆ ಇಮಾಮ್ಸಾಬ್ ಅರಳಿಕಟ್ಟಿ ಅವರು ತಮ್ಮ ಭೂಮಿ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ಸಂಬಂಧಿಸಿದಂತೆ ಶಿರಸ್ತೇದಾರ್ ಸುರೇಶ್ ಅರಕೇರಿ ಅವರು ₹2,000 ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ರೈತ ಲೋಕಾಯುಕ್ತರಿಗೆ ದೂರು ನೀಡಿದ್ದರು.
ದೂರು ಆಧಾರವಾಗಿ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಕುಂದಗೋಳ ತಹಶೀಲ್ದಾರ್ ಕಚೇರಿಯ ಭೂಮಿ ವಿಭಾಗದಲ್ಲಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಸುರೇಶ್ ಅರಕೇರಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಆರಂಭಿಸಿ, ಬಳಿಕ ಕಂದಾಯ ನಿರೀಕ್ಷಕರಾಗಿ ಹಾಗೂ ನಂತರ ಶಿರಸ್ತೇದಾರರಾಗಿ ಸುಮಾರು 20 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಬಿದ್ದಿದೆ.
ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಇನ್ಸ್ಪೆಕ್ಟರ್ಗಳಾದ ಪ್ರಭುಲಿಂಗಯ್ಯ ಹಿರೇಮಠ ಮತ್ತು ಪ್ರಸಾದ್ ಪಣೇಕರ್ ಅವರ ತಂಡ ಈ ದಾಳಿ ನಡೆಸಿದೆ. ದಾಳಿಯ ವೇಳೆ ಕಂದಾಯ ಇಲಾಖೆಯ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಡರಾತ್ರಿವರೆಗೆ ಪರಿಶೀಲನೆ ಮತ್ತು ವಿಚಾರಣೆ ಮುಂದುವರಿದಿದೆ.
ಶಿರಸ್ತೇದಾರ್ ಸುರೇಶ್ ಅರಕೇರಿ ಅವರ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.




