ಮಂಕಿ ಕ್ಯಾಪ್, ಕೈಗವಸು: 3ನೇ ಬಾರಿ ನಡೆಸಿದ ಪ್ಲಾನ್ ಕೊನೆಗೂ ಸಕ್ಸಸ್

ಹಾನಗಲ್ ತಾಲೂಕಿನ ಚಿಕ್ಕವಂಶಿ ಗ್ರಾಮದಲ್ಲಿ ಮಧ್ಯರಾತ್ರಿ ಮುಸುಕುದಾರಿ ಗ್ಯಾಂಗ್ ಬಂಗಾರದ ಅಂಗಡಿಯನ್ನು ಗುರಿಯಾಗಿಸಿಕೊಂಡು ಸಿನಿಮಾ ಶೈಲಿಯಲ್ಲಿ ದರೋಡೆ ಮಾಡಿದ್ದಾರೆ.

ಸುಮಾರು 8 ಜನರ ಗ್ಯಾಂಗ್ ಮಂಕಿ ಕ್ಯಾಪ್ ಮತ್ತು ಕೈಗವಸುಗಳನ್ನ ಧರಿಸಿ ಅಂಗಡಿಗೆ ನುಗ್ಗಿದ್ದು, ಕಟರ್ ಬಳಸಿ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಅಂಗಡಿಯಲ್ಲಿದ್ದ 300 ಗ್ರಾಂ ಚಿನ್ನ ಮತ್ತು 35 ಕೆಜಿ ಬೆಳ್ಳಿ ಸೇರಿದಂತೆ ಸುಮಾರು ₹1.20 ಕೋಟಿ ಮೌಲ್ಯದ ಆಭರಣಗಳನ್ನು ದೋಚಲಾಗಿದೆ. ಜೊತೆಗೆ ಸುಮಾರು 5 ಕ್ವಿಂಟಲ್ ತೂಕದ ಕಬ್ಬಿಣದ ಲಾಕರ್‌ನ್ನೂ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಣ್ಣಪ್ಪ ಭಜಂತ್ರಿ ಅವರಿಗೆ ಸೇರಿದ ಈ ಅಂಗಡಿ ಮೇಲೆ ಈ ಹಿಂದೆ ಎರಡು ಬಾರಿ ದರೋಡೆ ಯತ್ನ ನಡೆದಿದ್ದರೂ, ಈ ಬಾರಿ ಗ್ಯಾಂಗ್ ಯಶಸ್ವಿಯಾಗಿ ಕೃತ್ಯ ಎಸಗಿದೆ. ಸಿಸಿಟಿವಿಯಲ್ಲಿ ದರೋಡೆಕೋರರ ದೃಶ್ಯಗಳು ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

About The Author