ನೆಟ್‌ಫ್ಲಿಕ್ಸ್ ಸರ್ವರ್ ಕ್ರ್ಯಾಶ್! ಪಾಕಿಸ್ತಾನದಲ್ಲಿ ಧೂಳೆಬ್ಬಿಸಿದ ‘ಧುರಂಧರ್ 2’

ಬಾಲಿವುಡ್‌ನ ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಇದೀಗ ಪಾಕಿಸ್ತಾನದಲ್ಲೂ ಭಾರೀ ಸದ್ದು ಮಾಡುತ್ತಿದೆ. ಮೇ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪಾಕಿಸ್ತಾನದಲ್ಲಿ ನಂಬರ್ 1 ಟ್ರೆಂಡಿಂಗ್ ಸ್ಥಾನಕ್ಕೇರಿದ್ದು, ಪ್ರೇಕ್ಷಕರು ಮಧ್ಯರಾತ್ರಿವರೆಗೂ ಕಾದು ಸಿನಿಮಾ ವೀಕ್ಷಿಸಿದ್ದಾರೆ.

ವಿಶೇಷವೆಂದರೆ, ಚಿತ್ರದ ಕಥಾಹಂದರವೇ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಸಾಗಿದ್ದರೂ ಅಲ್ಲಿನ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಸಿನಿಮಾ ಬಿಡುಗಡೆಯಾದ ಕ್ಷಣದಲ್ಲೇ ಸಾವಿರಾರು ಮಂದಿ ಒಟ್ಟಿಗೆ ಲಾಗಿನ್ ಆಗಿ ವೀಕ್ಷಣೆ ಆರಂಭಿಸಿದ್ದರಿಂದ ಕೆಲಕಾಲ ನೆಟ್‌ಫ್ಲಿಕ್ಸ್ ಸರ್ವರ್ ಕೂಡ ನಿಧಾನಗೊಂಡಿತ್ತೆಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಹೇಳುವಂತೆ, ʼರಾತ್ರಿ 12 ಗಂಟೆಗೆ ಸಿನಿಮಾ ಅಪ್‌ಲೋಡ್ ಆಗುತ್ತಿದ್ದಂತೆಯೇ ಜನ ಒಟ್ಟಿಗೆ ಕ್ಲಿಕ್ ಮಾಡಿ ನೋಡಲು ಶುರುಮಾಡಿದರು. ‘ಧುರಂಧರ್ 2’ ಕ್ರೇಜ್ ಅಷ್ಟರ ಮಟ್ಟಿಗೆ ಇತ್ತುʼ ಎಂದು ತಿಳಿಸಿದ್ದಾರೆ.

ಈ ಹಿಂದೆ 2025ರಲ್ಲಿ ಬಿಡುಗಡೆಯಾದ ಮೊದಲ ಭಾಗ ‘ಧುರಂಧರ್’ ಕೂಡ ಪಾಕಿಸ್ತಾನದಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು. ಪೈರಸಿ ಸಿಡಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೂ ಸಿನಿಮಾ ಟ್ರೆಂಡ್ ಆಗಿತ್ತು. ಇದೀಗ ಎರಡನೇ ಭಾಗವೂ ಅದೇ ಮಟ್ಟಿನ ಹುಚ್ಚು ಕ್ರೇಜ್ ಸೃಷ್ಟಿಸಿದ್ದು, ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ₹1800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಹರಿದಾಡುತ್ತಿವೆ.

About The Author