Bagalakote: ಬಾಗಲಕೋಟೆಯಲ್ಲಿ ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಲೋಕಾಯುಕ್ತ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮರಳು ಮಾಫಿಯಾದ ಅಡ್ಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪಡೆ, ಭರ್ಜರಿ ಕಾರ್ಯಾಚರಣೆಯ ಮೂಲಕ ಅಕ್ರಮ ಜಾಲದ ಮೇಲೆ ದೊಡ್ಡ ಹೊಡೆತ ನೀಡಿದೆ.
ಮರಳು ದಂಧೆ… ನದಿಗಳ ಲೂಟಿ… ಕೋಟಿ ಕೋಟಿ ವ್ಯವಹಾರ… ಇದಕ್ಕೆ ಕಡಿವಾಣ ಹಾಕಲು ಇದೀಗ ಲೋಕಾಯುಕ್ತ ನೇರ ಅಖಾಡಕ್ಕೆ ಇಳಿದಿದೆ. ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಅಕ್ರಮ ಮರಳುಗಾರರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ನಡೆದ ಈ ಮೆಗಾ ಆಪರೇಷನ್ಗೆ 8 ಜಿಲ್ಲೆಗಳ ಅಧಿಕಾರಿಗಳು ಕೈಜೋಡಿಸಿದ್ದಾರೆ. ಸುಮಾರು 30 ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿ ಒಂದೇ ಸಮಯದಲ್ಲಿ ಜಿಲ್ಲೆಯ ಹಲವು ಕಡೆ ದಾಳಿ ನಡೆಸಿದ್ದಾರೆ.
ಮುಧೋಳ, ಬಾದಾಮಿ, ಹುನಗುಂದ, ಇಳಕಲ್, ಜಮಖಂಡಿ ಮತ್ತು ಬಾಗಲಕೋಟೆ ತಾಲೂಕುಗಳ ವ್ಯಾಪ್ತಿಯ 24 ಪ್ರಮುಖ ಸ್ಥಳಗಳಲ್ಲಿದ್ದ 36 ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ಮಾಫಿಯಾಗೆ ಭಾರೀ ಶಾಕ್ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬಳಸುತ್ತಿದ್ದ 65 ಟಿಪ್ಪರ್ಗಳು, 18 ಹಿಟಾಚಿಗಳು, 14 ಯಾಂತ್ರೀಕೃತ ದೋಣಿಗಳು, 6 ಟ್ರ್ಯಾಕ್ಟರ್ಗಳು ಹಾಗೂ ಒಂದು ಜೆಸಿಬಿ ಜಪ್ತಿಯಾಗಿದೆ. ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳು ವಶಕ್ಕೆ ಪಡೆದಿರುವುದು ದಂಧೆಯ ಪ್ರಮಾಣ ಎಷ್ಟಿತ್ತು ಎಂಬುದನ್ನು ಬಿಚ್ಚಿಟ್ಟಿದೆ.
ಇದಕ್ಕಿಂತಲೂ ದೊಡ್ಡ ಬೆಳವಣಿಗೆ ಎಂದರೆ, ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳ ಮೇಲೆಯೇ ಈಗ ಲೋಕಾಯುಕ್ತರ ಕಣ್ಣು ಬಿದ್ದಿದೆ. ಜಿಲ್ಲಾಧಿಕಾರಿ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಹಲವು ತಹಶೀಲ್ದಾರರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಆಡಳಿತ ವ್ಯವಸ್ಥೆಯನ್ನೇ ಪ್ರಶ್ನಿಸುವ ಬೆಳವಣಿಗೆ ನಡೆದಿದೆ.
ಮರಳು ಮಾಫಿಯಾದ ಸಾಮ್ರಾಜ್ಯದ ಮೇಲೆ ಬಿದ್ದಿರುವ ಈ ಹೊಡೆತ ಈಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ದೊಡ್ಡ ತಲೆಗಳು ಬಲೆಗೆ ಬೀಳುವ ಸಾಧ್ಯತೆಗಳೂ ಕೇಳಿಬರುತ್ತಿವೆ.
ಕ್ಯಾಮೆರ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಬಾಗಲಕೋಟ




