Koppala News: ಪಡಿತರ ಲೂಟಿ: ಹುಲಿಯಾಪುರ ನ್ಯಾಯಬೆಲೆ ಅಂಗಡಿ ಮಾಲೀಕನ ಅಮಾನತಿಗೆ ಗ್ರಾಮಸ್ಥರ ಆಕ್ರೋಶ

Koppala News: ಕುಷ್ಟಗಿ: ತಾಲೂಕಿನ ಹುಲಿಯಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ (ಸಂಖ್ಯೆ: 1637 ವಿ.ಎಸ್.ಎಸ್.ಎನ್. ಲಿಂಗದಹಳ್ಳಿ) ಮಾಲೀಕರು ಸಾರ್ವಜನಿಕರಿಗೆ ಪಡಿತರ ವಿತರಣೆಯಲ್ಲಿ ಭಾರೀ ವಂಚನೆ ಎಸಗುತ್ತಿದ್ದು, ತಕ್ಷಣವೇ ಅವರನ್ನು ಅಮಾನತುಗೊಳಿಸಿ, ಹೊಸಬರಿಗೆ ಜವಾಬ್ದಾರಿ ನೀಡಬೇಕೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಡ್‌ದಾರರಿಗೆ ತಲುಪದ ಪೂರ್ಣ ಅಕ್ಕಿ
ಸರ್ಕಾರದ ನಿಯಮಾವಳಿಗಳ ಪ್ರಕಾರ, ಅಂತ್ಯೋದಯ ಅನ್ನ ಯೋಜನೆಯಡಿ (AAY) ಪ್ರತಿ ಕಾರ್ಡ್‌ಗೆ ಮೇ ಮತ್ತು ಜೂನ್ ತಿಂಗಳ ತಲಾ 35 ಕೆಜಿಯಂತೆ ಒಟ್ಟು 70 ಕೆಜಿ ಅಕ್ಕಿಯನ್ನು ಒಟ್ಟಿಗೆ ವಿತರಿಸಬೇಕಾಗಿದೆ. ಆದರೆ, ಹುಲಿಯಾಪುರ ಗ್ರಾಮದ ಸುಮಾರು 150 ಅಂತ್ಯೋದಯ ಕಾರ್ಡ್‌ದಾರರಿಗೆ 70 ಕೆಜಿ ಬದಲಿಗೆ ಕೇವಲ 35 ಕೆಜಿ ಹಾಗೂ 50 ಕೆಜಿ ಮಾತ್ರ ನೀಡಿ ಕೈತೊಳೆದುಕೊಳ್ಳಲಾಗಿದೆ. ಈ ಬಾರಿ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಇಲ್ಲದ ಕಾರಣ, ಮೇ ಮತ್ತು ಜೂನ್ ತಿಂಗಳ ರಾಜ್ಯ ಹಾಗೂ ಕೇಂದ್ರ ಸರ್ಕಾರದ ತಲಾ 5 ಕೆಜಿ ಸೇರಿದಂತೆ ಒಟ್ಟು ಪಡಿತರವನ್ನು ಪ್ರತ್ಯೇಕವಾಗಿ ಬಯೋಮೆಟ್ರಿಕ್ ಪಡೆದು ವಿತರಿಸಬೇಕಾದ ನಿಯಮವನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

ಸತ್ತವರ ಹೆಸರಲ್ಲೂ ರೇಷನ್ ಗುಳುಂ!
ಪಡಿತರ ವಿತರಕರ ದರ್ಪ ಮತ್ತು ಭ್ರಷ್ಟಾಚಾರ ಇಲ್ಲಿಗೆ ನಿಂತಿಲ್ಲ. ಗ್ರಾಮದ ಫಲಾನುಭವಿಗಳು ನಿಧನರಾಗಿ ಕೇವಲ ಒಂದು ವಾರ ಕಳೆಯುವಷ್ಟರಲ್ಲೇ, ಸರ್ಕಾರದಿಂದ ಅವರ ಹೆಸರಿನಲ್ಲಿ ಪಡಿತರ ಬಿಡುಗಡೆಯಾಗಿದ್ದರೂ ಸಹ, ಮೃತರ ಕುಟುಂಬದವರಿಗೆ ಅಕ್ಕಿ ನೀಡಲು ಹಂಚಿಕೆದಾರರು ನಿರಾಕರಿಸಿ ಪಡಿತರ ಗುಳುಂ ಮಾಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಸಮಯ ಪ್ರಜ್ಞೆಯಿಲ್ಲದ ವಿತರಕರು; ಪ್ರಶ್ನಿಸಿದರೆ ಅವಾಚ್ಯ ನಿಂದನೆ
ಸರ್ಕಾರದ ನಿಯಮದ ಪ್ರಕಾರ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 1:30 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ರವರೆಗೆ ಕಡ್ಡಾಯವಾಗಿ ತೆರೆದಿರಬೇಕು. ಆದರೆ ಹುಲಿಯಾಪುರದಲ್ಲಿ ವಿತರಕರು ಮಧ್ಯಾಹ್ನ 12 ಗಂಟೆಗೆ ಬಂದು, ಸಂಜೆ 4 ಗಂಟೆಗೆಲ್ಲ ಅಂಗಡಿ ಮುಚ್ಚಿ ಹೊರಟುಹೋಗುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಹಾಗೂ ಗ್ರಾಹಕರು ಪ್ರಶ್ನಿಸಿದರೆ, ಪಡಿತರದಾರರ ಮೇಲೆ ಹಂಚಿಕೆದಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರುತ್ತಿದ್ದಾರೆ ಎಂದು ಕರವೇ ಗ್ರಾಮ ಘಟಕದ ಅಧ್ಯಕ್ಷರಾದ ಯಮನೂರಪ್ಪ ಬನ್ನಿಗೋಳ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳ ಭರವಸೆ:
ಗ್ರಾಮಸ್ಥರ ಪ್ರತಿಭಟನೆ ಮತ್ತು ಆಕ್ರೋಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಆಹಾರ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು. ತನಿಖೆ ನಡೆಸಿ ಪಡಿತರ ವಿತರಣೆಯಲ್ಲಿ ಲೋಪ ಎಸಗಿರುವುದು ಪ್ರಾಥಮಿಕವಾಗಿ ಕಂಡುಬಂದಿದ್ದು, ತಪ್ಪಿತಸ್ಥ ಹಂಚಿಕೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಅವರನ್ನು ತಕ್ಷಣವೇ ಅಮಾನತುಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರೆಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

About The Author